ದೆಹಲಿ/ಬೆಂಗಳೂರು:ಇನ್ನು ಮುಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ಹಾಲು ಲಭ್ಯ. ಸಿಎಂ ಸಿದ್ದರಾಮಯ್ಯ ಗುರುವಾರ ದೆಹಲಿಯಲ್ಲಿ ಕೆ.ಎಂ.ಎಫ್ನ ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
"ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೆಹಲಿ ನಗರದಲ್ಲಿ ಕೆ.ಎಂ.ಎಫ್ ಮತ್ತು ಮಂಡ್ಯ ಹಾಲು ಒಕ್ಕೂಟ ಸೇರಿ ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇಡೀ ದೇಶದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಪ್ರಾರಂಭಿಸಿದರು. ಹಿಂದೆ ಪಶುಸಂಗೋಪನಾ ಸಚಿವನಾಗಿದ್ದು, ಒಂದು ವರ್ಷ ಕಾಲ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷನೂ ಆಗಿದ್ದೆ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶೋಷಣೆಯಾಗುತ್ತಿದ್ದುದ್ದನ್ನು ಮನಗಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಯಿತು" ಎಂದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ:ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀ. ಗೆ 32 ರೂ.ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ.ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ, ನಂತರ 3ರೂ. ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗಳಿಗೆ ಹೆಚ್ಚಿಸಲು ಘೋಷಣೆ ಮಾಡಲಾಯಿತು. ಪ್ರೋತ್ಸಾಹಧನಕ್ಕಾಗಿ ಪ್ರತಿ ದಿನ 5 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದರು.