ಕರ್ನಾಟಕ

karnataka

ETV Bharat / state

'ಬಿಜೆಪಿಯವರು ಆರ್​ಎಸ್​ಎಸ್ ಮೇಲಿನ​ ಕೇಸ್​ ವಾಪಸ್​ ಪಡೆದಿದ್ದರಲ್ಲವೇ?': ಸಿಎಂ ಸಿದ್ದರಾಮಯ್ಯ - CM SIDDARAMAIAH

ಸಂಪುಟ ಉಪ ಸಮಿತಿಯ ತೀರ್ಮಾನದಂತೆ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಅದು ಇನ್ನೂ ಕೋರ್ಟ್​ನಲ್ಲಿ ತೀರ್ಮಾನವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Oct 13, 2024, 12:29 PM IST

ಮೈಸೂರು:ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಆರ್​ಎಸ್​ಎಸ್​ ಮೇಲಿನ ಕೇಸ್​ಗಳನ್ನು ವಾಪಸ್​ ಪಡೆದಿದ್ದರಲ್ಲವೇ? ಎಂದು ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​ ಪಡೆದಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದಕ್ಕೊಂದು ಸಂಪುಟ ಉಪ ಸಮಿತಿ ಇರುತ್ತದೆ, ಗೃಹ ಸಚಿವರು ಅದರ ಅಧ್ಯಕ್ಷರು. ಈ ಬಗ್ಗೆ ಅವರು ತೀರ್ಮಾನ ಮಾಡಿದ್ದು, ಸಂಪುಟ ಒಪ್ಪಿಗೆ ನೀಡಿದೆ. ಮುಂದೆ ಈ ನಿರ್ಧಾರವನ್ನು ಕೋರ್ಟ್​ಗೆ ಸಲ್ಲಿಸಲಾಗುತ್ತದೆ. ಅಲ್ಲಿ ಅಂತಿಮ ನಿರ್ಧಾರವಾಗಬೇಕು. ನ್ಯಾಯಾಲಯದ ತೀರ್ಪಿನ ಬಳಿಕವೇ ಪ್ರಕರಣ ವಾಪಸ್​​ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (ETV Bharat)

ರಾಜ್ಯಕ್ಕೆ ತೆರಿಗೆ ಅನ್ಯಾಯ: ಕಳೆದ ಐದು ವರ್ಷಗಳಲ್ಲಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಸುಮಾರು 60 ಸಾವಿರ ಕೋಟಿ ರೂ. ಅನ್ಯಾಯವಾಗಿದೆ. ಬಿಜೆಪಿ ಸಂಸದರು ಕರ್ನಾಟಕದ ಪರ ಧ್ವನಿ ಎತ್ತದೆ, ರಾಜ್ಯದ ಜನರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಕೇವಲ 6498 ಕೋಟಿ ರೂ.ಗಳ ತೆರಿಗೆ ಪಾಲು ಬಂದಿದ್ದು, ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. 31,000 ಕೋಟಿಗೂ ಹೆಚ್ಚಾಗಿ ಉತ್ತರ ಪ್ರದೇಶ ರಾಜ್ಯಕ್ಕೆ ನೀಡಲಾಗಿದೆ ಎಂದರು.

ಅದ್ಧೂರಿ ದಸರಾ:ಈ ವರ್ಷ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ದಸರಾ ಉತ್ಸವ ಯಶಸ್ವಿಯಾಗಲು ಕಾರಣರಾದ ಜಿಲ್ಲಾ ಮಂತ್ರಿಗಳು ಹಾಗೂ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಅಭಿನಂದನೆಗಳು. ರಾಜ್ಯದಲ್ಲಿ ಸಾಕಷ್ಟು ಮಳೆ, ಬೆಳೆಯಾಗಿದ್ದರಿಂದ ಈ ಬಾರಿ ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಜನರು ದಸರಾದಲ್ಲಿ ಸಂತೋಷದಿಂದ ಭಾಗವಹಿಸಿದ್ದು, ಸರ್ಕಾರದ ಶ್ರಮ ಸಾರ್ಥಕವಾಗಿದೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ:ಬಾಬಾ ಸಿದ್ದಿಕಿ ಕೊಲೆ: 'ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ'- ಡಿ.ಕೆ.ಶಿವಕುಮಾರ್

ABOUT THE AUTHOR

...view details