ಹಾವೇರಿ:ಕಾಂಗ್ರೆಸ್ನವರು ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂಪಾಯಿ ಸಂಗ್ರಹಿಸಿ ಅದನ್ನು ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಇದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಇಲ್ಲದಿದ್ದರೆ ನೀವು ನಿವೃತ್ತಿ ತಗೋತೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.
ಶಿಗ್ಗಾಂವಿಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಪರ ಮತಯಾಚಿಸಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟೊಂದು ಸುಳ್ಳು ಹೇಳೋ ಪ್ರಧಾನಿಯನ್ನು ನಾನು ನೋಡಿಲ್ಲ. ಸಿಎಂ ಆಗೋಕೆ ಬಿಜೆಪಿಯಲ್ಲಿ 2 ಸಾವಿರ ಕೊಟಿ ಕೊಡಬೇಕು ಅಂತ ಯತ್ನಾಳ್ ಹೇಳಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಎರಡು ಸಾವಿರ ಕೊಟ್ಟು ಸಿಎಂ ಆಗಿದ್ದಾರೆ. ವಿಜಯೇಂದ್ರ ಅಧ್ಯಕ್ಷ ಆಗಿದ್ದು ಸಹ ಹಣ ಕೊಟ್ಟು ಎಂದು ದೂರಿದರು.
ಬಸವರಾಜ ಬೊಮ್ಮಾಯಿ ಲೋಕಸಭೆಗೆ ಸ್ಪರ್ಧಿಸಲ್ಲ ಎಂದು ಹೇಳಿ ನಂತರ ಚುನಾವಣೆಯಲ್ಲಿ ಗೆದ್ದರು. ಖಾಲಿಯಾದ ಶಾಸಕ ಸ್ಥಾನವನ್ನು ಬೇರೆಯವರಿಗೆ ಕೊಡಬಹುದಿತ್ತು. ಆದರೆ ತಮ್ಮ ಮಗನನ್ನು ರಾಜಕೀಯವಾಗಿ ಬೆಳೆಸಲು ಭರತ್ ಬೊಮ್ಮಾಯಿಗೆ ಟಿಕೆಟ್ ಕೊಡಿಸಿದರು. ವಂಶ ಪಾರಂಪರ್ಯ ಆಡಳಿತ ಇರಬಾರದು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಇದಕ್ಕೆ ಏನಂತ ಕರೆಯುತ್ತೀರಿ ಮಿಸ್ಟರ್ ನರೇಂದ್ರ ಮೋದಿ ಅವರೇ. ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಇವರೆಲ್ಲಾ ಒಂದೇ ಕುಟುಂಬದವರು ಅಲ್ವಾ ಎಂದು ಪ್ರಶ್ನಿಸಿದರು. ಚುನಾವಣೆಗೋಸ್ಕರ ಭಾಷಣ ಮಾಡೋದು ಸುಲಭ. ಆದ್ರೆ ಹೇಳಿದಂತೆ ನಡೆದುಕೊಳ್ಳುವುದು ಕಷ್ಟದ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೋವಿಡ್ ಹಗರಣ:ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾಗಿದ್ದ ಬಿ ಶ್ರೀರಾಮುಲು ಸೇರಿ ಟೆಂಡರ್ ಕರೆಯದೇ, ಕ್ಯಾಬಿನೆಟ್ ಒಪ್ಪಿಗೆ ಇಲ್ಲದೇ 2,147 ಕೋಟಿ ರೂಪಾಯಿ ಕೊಟ್ಟು 3 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದ್ದರು. ಚೀನಾದಿಂದ ಯಾವುದನ್ನೂ ಕೊಂಡುಕೊಳ್ಳಲ್ಲ ಅಂತ ಪ್ರಧಾನಿ ಮೋದಿ ಹೇಳ್ತಾರೆ. ಆದ್ರೆ ಬಿಎಸ್ವೈ ಅವಧಿಯಲ್ಲಿ ಅಧಿಕಾರಾವಧಿಯಲ್ಲಿ ರಾಜ್ಯದ 2 ಸಾವಿರ ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ:'ಮಹಾ' ಚುನಾವಣೆಗಾಗಿ ಕರ್ನಾಟಕದಲ್ಲಿ ₹700 ಕೋಟಿ ಲೂಟಿ ಮಾಡಿದ ಕಾಂಗ್ರೆಸ್: ಪ್ರಧಾನಿ ಮೋದಿ ಗಂಭೀರ ಆರೋಪ