ಬೆಂಗಳೂರು: "ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಲು ಪಕ್ಷ ಹಾಗೂ ಸ್ವಾಭಿಮಾನಿಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಹಾಸನದಲ್ಲಿ ಸಮಾವೇಶ ನಡೆಸಲಾಗುತ್ತಿದೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಹಿಂದೆ ಜೆಡಿಎಸ್ ಬಿಟ್ಟಾಗಲೂ ಸಿದ್ದರಾಮಯ್ಯ ಸಮಾವೇಶ ಮಾಡಿದ್ದರು ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿ, "ನಾನು ಜೆಡಿಎಸ್ ಬಿಟ್ಟಿರಲಿಲ್ಲ. ಅವರು ಸುಳ್ಳು ಹೇಳುತ್ತಾರೆ. ದೇವೇಗೌಡರು ನನ್ನನ್ನು ಜೆಡಿಎಸ್ನಿಂದ ವಜಾ ಮಾಡಿದ್ದರು. ಆ ಕಾರಣಕ್ಕೆ ಅಂದು ಸಮಾವೇಶ ಮಾಡಿದ್ದೆ" ಎಂದರು.
"ಆಗ ಬೇರೆ ದಾರಿ ಇಲ್ಲದೇ ಅಹಿಂದ ಸಂಘಟನೆ ಮಾಡಲು ಶುರು ಮಾಡಿದೆ. ಅಹಿಂದ ಸಮಾವೇಶ ಮಾಡಿದ್ದೇನೆ. ಈಗ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಲು ಪಕ್ಷ ಹಾಗೂ ಸ್ವಾಭಿಮಾನಿಗಳ ಒಕ್ಕೂಟದಿಂದ ಏರ್ಪಡಿಸಿರುವ ಸಮಾವೇಶವಿದು. ಬರೀ ಸ್ವಾಭಿಮಾನಿ ಒಕ್ಕೂಟವೇ ಹಾಸನ ಸಮಾವೇಶ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಸ್ವಾಭಿಮಾನಿಗಳ ಒಕ್ಕೂಟದಿಂದ ಜಂಟಿ ಆಶ್ರಯದಲ್ಲಿ ಮಾಡುತ್ತಿರುವ ಸಮಾವೇಶ. ಇದಕ್ಕೆ ಸುರ್ಜೇವಾಲ, ಮಲ್ಲಿಕಾರ್ಜುನ ಖರ್ಗೆಯವರನ್ನೂ ಆಹ್ವಾನಿಸಿದ್ದೇನೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಸಭೆ ಮಾಡಲಿದ್ದಾರೆ. ಪಕ್ಷವೂ ಸಕ್ರಿಯವಾಗಿ ಭಾಗವಹಿಸಲಿದೆ" ಎಂದು ತಿಳಿಸಿದರು.