ಬೆಂಗಳೂರು: ಒಂದು ವರ್ಷದ ಆಡಳಿತ ನನಗೆ ತೃಪ್ತಿ ತಂದಿದೆ. ನಮ್ಮ ಪಕ್ಷಕ್ಕೂ ತೃಪ್ತಿ ತಂದಿದೆ. ಹೈಕಮಾಂಡ್ಗೂ ತೃಪ್ತಿ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಸಂವಾದ ಉದ್ದೇಶಿಸಿ ಮಾತನಾಡಿದ ಅವರು, ನುಡಿದಂತೆ ನಡೆದಿದ್ದೇವೆ. ಎರಡನೇ ವರ್ಷಕ್ಕೆ ಹುರುಪಿನಿಂದ ಕಾಲಿಡುತ್ತಿದ್ದೇವೆ. ಅಧಿಕಾರಕ್ಕೆ ಬಂದ ಬಳಿಕ ಮಧ್ಯವರ್ತಿಗಳ ಹಾವಳಿ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಲ್ಲಿ ಈವರೆಗೆ 201 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, 4,857.95 ಕೋಟಿ ರೂ. ಉಚಿತ ಟಿಕೆಟ್ ಮೌಲ್ಯವಾಗಿದೆ. ಅನ್ನ ಭಾಗ್ಯ ಯೋಜನೆಯಡಿ 4.10 ಕೋಟಿ ಫಲಾನುಭವಿಗಳಿಗೆ 5754.6 ಕೋಟಿ ರೂ. ಹಣ ನೀಡಿದ್ದೇವೆ. ಗೃಹ ಜ್ಯೋತಿಯಡಿ 1.60 ಕೋಟಿ ಜನರಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಿದ್ದೇವೆ. ಅದಕ್ಕಾಗಿ 7,436 ಕೋಟಿ ರೂ. ಖರ್ಚಾಗಿದೆ. 1.20 ಕೋಟಿ ಯಜಮಾನಿಯರಿಗೆ ಗೃಹ ಲಕ್ಷ್ಮಿ ಯೋಜನೆ ತಲುಪಿದೆ. ಯುವನಿಧಿಯಡಿ 29,587 ಫಲಾನುಭವಿಗಳಿಗೆ ಹಣ ನೀಡಿದ್ದೇವೆ. ಪಂಚ ಗ್ಯಾರಂಟಿಗೋಸ್ಕರ 2023-24ರಲ್ಲಿ 36,000 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಗ್ಯಾರಂಟಿ ಯೋಜನೆಗಳ ಅನುದಾನದ ಬಗ್ಗೆ ಮಾಹಿತಿ ನೀಡಿದರು.
ಗ್ಯಾರಂಟಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಆರೋಗ್ಯಕರ ಟೀಕೆ ಮಾಡಬೇಕು. ಆದರೆ ಪ್ರತಿಪಕ್ಷಗಳು ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ ಎಂದು ಟೀಕೆ ಮಾಡಿದರು. ನಾವು ಅಭಿವೃದ್ಧಿ ಕೆಲಸವನ್ನೂ ನಿಲ್ಲಿಸಿಲ್ಲ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂದು ಟೀಕಿಸಿದ್ದರು. ಈ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. 54,374 ಕೋಟಿ ರೂ. ಬಂಡವಾಳ ವೆಚ್ಚ ಮಾಡುತ್ತೇವೆ ಅಂದಿದ್ದೆವು. ನಾವು ಖರ್ಚು ಮಾಡಿದ್ದು 56,274 ಕೋಟಿ ರೂ. ಆಗಿದೆ. ಆ ಮೂಲಕ ಅಭಿವೃದ್ಧಿ ಕೆಲಸವನ್ನೂ ನಿಲ್ಲಿಸಿಲ್ಲ. ಯಾವ ಇಲಾಖೆಯಲ್ಲೂ ನಾವು ಅಭಿವೃದ್ಧಿ ಕೆಲಸ ಕಡಿಮೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾಲ ಮಾಡಿರುವುದು ನಿಜ. ವಿತ್ತೀಯ ಹೊಣೆಗಾರಿಕೆ ಕಾಯ್ದೆ ಪ್ರಕಾರ ಶೇ.25ರಷ್ಟು ಒಳಗಡೆ ಮಾಡಿದ್ದೇವೆ. ಹೆಚ್ಚಿನ ಸಾಲ ಮಾಡಿಲ್ಲ. ತೆರಿಗೆ ಸಂಗ್ರಹ ಹೆಚ್ಚಿಸಿದ್ದೇವೆ. ಭ್ರಷ್ಟಾಚಾರ ಕಡಿಮೆ ಮಾಡಿ, ಬಿಗಿ ಆಡಳಿತ ಮಾಡಿ ಬಂಡವಾಳ ವೆಚ್ಚವನ್ನು ಮಾಡುತ್ತೇವೆ. ನೀರಾವರಿ ಯೋಜನೆಗೆ ನಾವು ಬಜೆಟ್ನಲ್ಲಿ 16,371 ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದೆವು. ಆದರೆ 18,198 ಕೋಟಿ ರೂ. ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ ಬಜೆಟ್ನಲ್ಲಿ 9,722 ಕೋಟಿ ನೀಡಿದ್ದೇವೆ. 9,641 ಕೋಟಿ ಖರ್ಚು ಮಾಡಿದ್ದೇವೆ. ಖಜಾನೆ ಖಾಲಿಯಾಗಿದೆ ಎಂದು ಹೇಳುತ್ತಿದ್ದರು. ಪಾಪರ್ ಆಗುತ್ತೆ ಅಂದಿದ್ರು. ಪಾಪರ್ ಆಗಿದ್ದರೆ ಇಷ್ಟು ಹಣ ಖರ್ಚು ಮಾಡಲು ಆಗುತ್ತಾ?. ಸುಳ್ಳು ಸತ್ಯಕ್ಕೆ ಹತ್ತಿರವಾಗಿರಬೇಕಲ್ಲಾ?. ಸುಳ್ಳಿನ ಪರಮಾವಧಿ ಅವರದ್ದು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:'ಕರ್ನಾಟಕ ಮಾದರಿ ಆಡಳಿತ' ಸೂತ್ರದೊಂದಿಗೆ ವರ್ಷ ಪೂರೈಸಿದ ಕಾಂಗ್ರೆಸ್ ಸರ್ಕಾರ - ONE YEAR FOR CONGRESS GOVT
ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ:ಮುಸ್ಲಿಮರಿಗೆ 2bಯಡಿ ಶೇ.4 ಮೀಸಲಾತಿ ನೀಡಲಾಗುತ್ತಿದೆ. ಚಿನ್ನಪ್ಪ ರೆಡ್ಡಿ ಆಯೋಗದಂತೆ 30 ವರ್ಷಗಳಿಂದ ಈ ಮೀಸಲಾತಿ ಜಾರಿಯಲ್ಲಿದೆ. ಬೊಮ್ಮಾಯಿ ಸರ್ಕಾರ ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದರು. ಅದರ ವಿರುದ್ಧ ಮುಸ್ಲಿಂರು ಕೋರ್ಟ್ಗೆ ಹೋಗಿದ್ದರು. ಕೋರ್ಟ್ನಲ್ಲಿ ಬೊಮ್ಮಾಯಿ ಸರ್ಕಾರ ನಾವು ಇದನ್ನು ಜಾರಿ ಮಾಡಲ್ಲ ಎಂದಿದ್ದರು. ಮೋದಿ ಅವರು ಈಗ ಈ ತರ ಸುಳ್ಳು ಹೇಳಬಹುದಾ?. ಮುಸ್ಲಿಂಮರಿಗೆ ಹಿಂದುಳಿದ ವರ್ಗದಿಂದ ಕಿತ್ತು ಮೀಸಲಾತಿ ಕೊಟ್ಟಿಲ್ಲ. ನಾವು ಕಿತ್ತು ಕೊಳ್ಳುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಈಗ ಭ್ರಷ್ಟಾಚಾರ ಇಲ್ಲ ಅಂದು ಹೇಳಲ್ಲ. ಆದರೆ 40% ಕಮಿಷನ್ ಬಗ್ಗೆ ಬೊಮ್ಮಾಯಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಆರೋಪ ಮಾಡಿದ್ದರು. ಆಗ ಅವರು ಯಾವುದೇ ತನಿಖಾ ಆಯೋಗವನ್ನು ರಚಿಸಿಲ್ಲ. ನಾನು ಬಂದ ಬಳಿಕ ಎಲ್ಲಾ ತನಿಖೆಗಳನ್ನು ಮಾಡಲು ಆಯೋಗ ರಚನೆ ಮಾಡಿದ್ದೇವೆ. ಸಮಾಜಕ್ಕೆ ಅಂಟಿದ ರೋಗ ಭ್ರಷ್ಟಾಚಾರವಾಗಿದೆ. ಅದನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಾತಿ ಗಣತಿ ವರದಿ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಜಾತಿ ಗಣತಿ ವರದಿಯಿಂದ ಯಾರಿಗೂ ತೊಂದರೆ ಆಗಲ್ಲ. ಆದರೆ ವರದಿಯನ್ನೇ ತಗೋಬೇಡಿ ಅಂತಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರ ಬಗ್ಗೆ ಗೊತ್ತಾಗಬೇಕು. ಅವರಿಗೆ ಪ್ರಾಶಸ್ತ್ಯ ಕೊಡಬೇಕಲ್ಲ. ಅವರಿಗೆ ಆದ್ಯತೆ ಕೊಡದೇ ಇದ್ದರೆ ಸಾಮಾಜಿಕ ನ್ಯಾಯ ಎಲ್ಲಿ ಸಿಗುತ್ತೆ?. ಜಾತಿ ಗಣತಿ ಮಾಡದೇ ಇದ್ದರೆ ಹೇಗೆ ಗೊತ್ತಾಗುತ್ತೆ. ಅದಕ್ಕೋಸ್ಕರ ಜಾತಿ ಗಣತಿ ಮಾಡಿಸಿದ್ದೆ ಎಂದು ತಿಳಿಸಿದರು. ವರದಿ ಜಾರಿ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ತೀರ್ಮಾನ ಮಾಡುತ್ತೇವೆ. ಇದರಿಂದ ಯಾರಿಗೂ ಹಾನಿ ಆಗಲ್ಲ. ಆರ್ಥಿಕವಾಗಿ ದುರ್ಬಲ ಸಮುದಾಯಕ್ಕೆ ಮೀಸಲಾತಿ ಕೊಟ್ಟಿಲ್ವಾ?. ಮೀಸಲಾತಿ ಸಿಗದವರು ಯಾವ ಜಾತಿಯವರು ಇದ್ದಾರೆ. ಮೀಸಲಾತಿ ವಿರೋಧಿಸುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದರು.