ಬೆಂಗಳೂರು: ಭಾರತದ ಅಗತ್ಯತೆಯನ್ನು ಅರಿತು ಸಮಾಜ ಹೇಗೆ ಬದಲಾಗಬೇಕು ಎಂಬ ರೀತಿಯ ಸಂವಿಧಾನ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಎಂದೆಂದಿಗೂ ಪ್ರಸ್ತುತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ತೋಟಗಾರಿಕೆ ಇಲಾಖೆಯಿಂದ ನಗರದ ಲಾಲಾಬಾಗ್‌ನಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಕುರಿತ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. 1949 ನವೆಂಬರ್ 21ರಂದು ದೇಶದ ಸಂವಿಧಾನ ಅಂಗೀಕಾರಕ್ಕೂ ಮುನ್ನಾ ದಿನ ಸಂವಿಧಾನ ರಚನೆಯ ವಿಧಾನ, ಉದ್ದೇಶ, ಎಂತಹ ಸರ್ಕಾರ ಇರಬೇಕು, ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿರಬೇಕು ಎಂಬುದರ ಕುರಿತಂತೆ ಐತಿಹಾಸಿಕ ಭಾಷಣ ಮಾಡಿದ್ದರು ಎಂದು ಸಿಎಂ ಸ್ಮರಿಸಿದರು.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿದ್ದರಾಮಯ್ಯ (ETV Bharat) ಎಲ್ಲ ಜಾತಿ, ಧರ್ಮ, ಪ್ರದೇಶ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶಗಳು ಲಭ್ಯವಾಗಬೇಕು ಎಂಬ ಆಶಯ ಹೊಂದಿದ್ದರು. ಎಲ್ಲರಿಗೂ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ ಸಿಕ್ಕಲ್ಲಿ ಮಾತ್ರ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಲಿದೆ ಎಂಬುದನ್ನು ಅಂಬೇಡ್ಕರ್ ಬಲವಾಗಿ ನಂಬಿದ್ದರು. ಈ ಎಲ್ಲ ಅಂಶಗಳನ್ನು ತೋಟಗಾರಿಕೆ ಇಲಾಖೆ ಸಾರ್ವಜನಿಕರಿಗೆ ತಿಳಿಸಲು ಕ್ರಮ ವಹಿಸಿದೆ ಎಂದರು.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿದ್ದರಾಮಯ್ಯ (ETV Bharat) ಅಂಬೇಡ್ಕರ್ ಸಾಮಾಜಿಕ ನ್ಯಾಯದ ಪರವಾಗಿ ಮಾಡಿದ ಹೋರಾಟ, ಹುಟ್ಟು, ಜೀವನ ಮತ್ತು ಬೌದ್ಧ ಮತವನ್ನು ಯಾಕೆ ಸ್ವೀಕರಿಸಿದರು ಮತ್ತು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಮಾಡಿದ ಭಾಷಣದ ಕುರುಹುಗಳನ್ನು ಈ ಪ್ರದರ್ಶನದಲ್ಲಿ ವಿವರಿಸಲಾಗಿದೆ. ದೇಶದಲ್ಲಿರುವ ಎಲ್ಲರಿಗೂ ಅಂಬೇಡ್ಕರ್ ಕೊಡುಗೆ ಮತ್ತು ಸಂವಿಧಾನದ ಕುರಿತು ಅರಿವಾಗಬೇಕಾಗಿದೆ. ಆಗ ಮಾತ್ರ ಸಂವಿಧಾನಕ್ಕೆ ಗೌರವ ಸಿಗಲು ಸಾಧ್ಯ ಎಂಬ ಉದ್ದೇಶದಲ್ಲಿ ಪ್ರದರ್ಶನ ಹಮ್ಮಿಕೊಂಡಿದ್ದು, ಅತ್ಯಂತ ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿದ್ದರಾಮಯ್ಯ (ETV Bharat) 30 ಲಕ್ಷಕ್ಕೂ ಹೆಚ್ಚು ಹೂವುiಳ ಬಳಕೆ: ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳಿಂದ ಸುಮಾರು 30 ಲಕ್ಷಕ್ಕೂ ಹೆಚ್ಚು ಹೂವುಗಳನ್ನು ತರಿಸಿ ಅಂಬೇಡ್ಕರ್ ಜೀವನ, ವಿದ್ಯಾಭ್ಯಾಸವನ್ನು ಸಮಾಜದ ಪ್ರತಿಯೊಬ್ಬರಿಗೂ ತಿಳಿಯುವಂತಹ ಕಾರ್ಯ ಆಗುತ್ತಿದೆ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಲಾಲ್‌ಬಾಗ್‌ನಲ್ಲಿ ಪ್ರತಿವರ್ಷ ಸ್ವಾತಂತ್ರ್ಯ ದಿನೋತ್ಸವ ಮತ್ತು ಗಣರಾಜ್ಯೋತ್ಸವದ ಅಂಗವಾಗಿ ಒಂದೊಂದು ವಿಷಯ ವಸ್ತುವಿನ ಆಧಾರದಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಸುಮಾರು 12 ದಿನಗಳ ಕಾಲ ನಡೆಯಲಿದೆ ಎಂದು ಸಿಎಂ ಹೇಳಿದರು.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿದ್ದರಾಮಯ್ಯ (ETV Bharat) ಅಂಬೇಡ್ಕರ್ ಮೊಮ್ಮಗ ವಿಶೇಷ ಅತಿಥಿ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಡಾ.ಭೀಮ್ ರಾವ್ ಯಶ್ವಂತ್ ಅಂಬೇಡ್ಕರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾಡಿರುವ ಎಲ್ಲ ಕೆಲಸ ಕಾರ್ಯಗಳು ಸಮಾಜಕ್ಕಾಗಿಯೇ ಆಗಿದೆ. ಅಂಬೇಡ್ಕರ್ ಅವರು ಇಡೀ ಜೀವನ ದೇಶಕ್ಕಾಗಿ ಸಮರ್ಪಣೆ ಮಾಡಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲಿ ಅಂಬೇಡ್ಕರ್ ಅವರ ಇಡೀ ಜೀವನ ಮತ್ತು ಸಂದೇಶಗಳನ್ನು ವಿವಿಧ ಹೂವು ಮತ್ತು ಗಿಡಗಳಲ್ಲಿ ವಿವರಿಸಲಾಗಿದೆ ಎಂದರು. ಸಚಿವರಾದ ಜಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ ಶಾಸಕ ಸರವಣ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ:ಹೂವಿನಲ್ಲಿ ಅರಳಲಿದೆ ಅಂಬೇಡ್ಕರ್ ಜೀವನ ಗಾಥೆ: ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ಲಾಲ್‌ಬಾಗ್ - Lalbagh ready for fruit flower show