ಬೆಂಗಳೂರು:ಮುಡಾ ನಿವೇಶನ ಹಂಚಿಕೆ ಕಾನೂನುಬದ್ಧವಾಗಿದ್ದು, ಇದರಲ್ಲಿ ನನ್ನ ಹಾಗೂ ನನ್ನ ಪತ್ನಿ ಪಾತ್ರ ಇಲ್ಲ. ಬಿಜೆಪಿ-ಜೆಡಿಎಸ್ ರಾಜಕಾರಣಕ್ಕೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಇಂದು ವಿಧಾನಸೌಧದಲ್ಲಿ ದಾಖಲೆ ಸಮೇತವಾಗಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಸಿಎಂ, ಬಿಜೆಪಿ-ಜೆಡಿಎಸ್ ರಾಜಕೀಯವಾಗಿ ಹತಾಶರಾಗಿದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಾರೆ. ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ಸಹಿಸಲು ಆಗುತ್ತಿಲ್ಲ. ಕಲಾಪದ ಎರಡು ವಾರಗಳು ಒಂದೇ ವಿಚಾರ ಪ್ರಸ್ತಾಪವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ವಿಚಾರ ಬಿಟ್ಟರೆ ರಾಜ್ಯದ ಸಮಸ್ಯೆ ಬಗ್ಗೆ ಚಕಾರ ಎತ್ತಿಲ್ಲ. ಪ್ರವಾಹದ ಬಗ್ಗೆ ವಿಪಕ್ಷಗಳು ಯಾರೂ ಮಾತನಾಡಿಲ್ಲ. ಇದನ್ನೆಲ್ಲಾ ನೋಡಿದರೆ ಸಿಎಂ, ರಾಜ್ಯ ಸರ್ಕಾರಕ್ಕೆ ಮಸಿ ಬಳಿಯಬೇಕು ಎಂಬ ಉದ್ದೇಶ ಇದೆ ಅನ್ನಿಸುತ್ತೆ. ಇದು ಕಾನೂನುಬದ್ಧವಾಗಿದೆ. ಬಿಜೆಪಿ-ಜೆಡಿಎಸ್ ರಾಜಕಾರಣಕ್ಕೆ ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನ. ಬಿಜೆಪಿ-ಜೆಡಿಎಸ್ ಗೆ ಎರಡನೇ ಸರಿ ಸಿಎಂ ಆಗುವುದನ್ನು ಸಹಿಸಲು ಆಗುತ್ತಿಲ್ಲ ಎಂದರು.
ಶಾಸಕನಾಗಿ, ಮಂತ್ರಿಯಾಗಿ, ಸಿಎಂ ಆಗಿ ಸುಮಾರು 40 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ಇಂದಿನವರೆಗೆ ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಬಿಜೆಪಿ-ಜೆಡಿಎಸ್ ದ್ವೇಷದಿಂದ, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅವರು ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿದರೂ ಹೆಚ್ಚು ಸ್ಥಾನ ಗೆಲ್ಲಲು ಆಗಿಲ್ಲ. ಜನರ ವಿಶ್ವಾಸ ಗಳಿಸಲು ಅವರು ವಾಮಮಾರ್ಗ ಬಳಸುತ್ತಿದ್ದಾರೆ ಎಂದು ಟೀಕಿಸಿದರು.
2-8-1935ರಲ್ಲಿ ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲೂಕು ಕಚೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು 15-8-1935 ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲು ಕ್ರಮವಹಿಸಿದ್ದಾರೆ. 26-9-1935 ರಂದು ಹರಾಜು ನೋಟೀಸು ಹೊರಡಿಸಿದ್ದಾರೆ. 3-10-1935 ರಂದು ಹರಾಜು ನಡೆಸಲಾಗುವುದೆಂದು ನೋಟೀಸಿನಲ್ಲಿ ತಿಳಿಸಿದ್ದಾರೆ. ಅದರ ಪ್ರಕಾರ ಹರಾಜು ನಡೆಸಲಾಗಿದೆ. ಹರಾಜು ನಡೆಸಿದ ಮೇಲೆ ಈ ರೀತಿ ದಾಖಲು ಮಾಡಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂ. 464ರ 3.16 ಜಮೀನನ್ನು ಹರಾಜು ಮಾಡಿಸಲಾಯ್ತು. 1 ರೂಪಾಯಿಗೆ ನಿಂಗ ಬಿನ್ ಜವರಗೆ ಹರಾಜು ಮಾಡಲಾಯ್ತು ಎಂದು ತಿಳಿಸಿದರು.
ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಸ್ವಯಾರ್ಜಿತ ಜಮೀನಾಗಿರುವುದರಿಂದ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದರು.
10-4-1993 ರಲ್ಲಿ ಒಂದು ವಂಶವೃಕ್ಷ ಮಾಡಿಸಿದ್ದಾರೆ. ಅದರ ಪ್ರಕಾರ ನಿಂಗ ಬಿನ್ ಜವರ ಇವರಿಗೆ ಮೂರು ಜನ ಮಕ್ಕಳು. ಮೊದಲನೆ ಮಲ್ಲಯ್ಯ, ಎರಡನೆ ಮೈಲಾರಯ್ಯ ಮತ್ತು ಮೂರನೆ ಜೆ. ದೇವರಾಜು. ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಎರಡನೆ ಮೈಲಾರಯ್ಯ ಇವರಿಗೆ ಮಂಜುನಾಥಸ್ವಾಮಿ ಎಂ ಎನ್ನುವವರಿದ್ದಾರೆ. ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ. 3ನೆಯವರು ದೇವರಾಜು ಎನ್ನುವವರು ಎಂದು ವಿವರಿಸಿದರು.
ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ. ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂ. 464ರ 3-16 ಈ ಜಮೀನುಗಳಿಗೆ ಖಾತೆ ಮಾಡಿಕೊಡಲು ಲೇಟ್ ನಿಂಗ ಬಿನ್ ಜವರ ಅವರ ಮೂರನೆ ಮಗ ಜೆ.ದೇವರಾಜು ನಮೂನೆ 19ರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈ ಜಮೀನು ನಿಂಗ ಬಿನ್ ಜವರ ಅವರಿಗೆ ಸೇರಿದ್ದು, ಅವರು ಫೌತಿಯಾಗಿ ನಮಗೆ ಸದರಿ ಜಮೀನಿನಲ್ಲಿ ಭಾಗ ಬರಬೇಕಾಗಿರುವುದಿಲ್ಲ. ಈಗಾಗಲೆ ನಾವು ಸರ್ವೆ ನಂ. 462 ರಲ್ಲಿ 4 ಎಕರೆ ಜಮೀನನ್ನು ಪುಟ್ಟಮ್ಮ ಎನ್ನುವವರಿಗೆ ಮಾರಿರುತ್ತೇವೆ. ಆದ್ದರಿಂದ ಅರ್ಜಿದಾರರಾದ ಜೆ. ದೇವರಾಜುರವರಿಗೆ ಸದರಿ ಜಮೀನುಗಳನ್ನು ಖಾತೆ ಮಾಡುವುದರಲ್ಲಿ ನಮ್ಮ ತಕರಾರು ಏನೂ ಇರುವುದಿಲ್ಲವೆಂದು ಸಹಿ ಹಾಕಿದ್ದರು ಎಂದು ತಿಳಿಸಿದರು.
ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನುಗಳು ವರ್ಗಾವಣೆಯಾಗಿವೆ. ಹಾಗಾಗಿ ಕ್ರಯದಾರರ ವಾಸರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿಜೆಪಿಯವರ ಆರೋಪವು ಸುಳ್ಳು. ಈ ಎಲ್ಲ ವ್ಯವಹಾರಗಳು 2010ಕ್ಕಿಂತ ಮುಂಚೆ ನಡೆದಿವೆ. ಇವು ನನಗೆ ಸಂಬಂಧಪಟ್ಟಿದ್ದಲ್ಲ. ಸದರಿ ಜಮೀನುಗಳನ್ನು ಭೂಸ್ವಾಧೀನ ಮಾಡಲು 18-09-1992ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಅದು ಬಹಳ ವರ್ಷಗಳಾದರೂ ಇತ್ಯರ್ಥವಾಗಿಲ್ಲ. ಆಗ, ಜಿ.ದೇವರಾಜು 13-08-1996 ರಂದು ತಮ್ಮ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ. ಈ ಜಮೀನುಗಳ ಅಂತಿಮ ಅಧಿಸೂಚನೆಯಾಗಿದ್ದು 20-08-1997 ರಂದು. ಅದಕ್ಕೂ ಮೊದಲೇ ಈ ಅರ್ಜಿ ಬರೆದಿದ್ದಾರೆ. ಅರ್ಜಿಯ ಮೇಲೆ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡ ಇವರು ಮನವಿ ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅಭಿಪ್ರಾಯದೊಂದಿಗೆ ಮಂಡಿಸಿ ಎಂದು ಕಾರ್ಯದರ್ಶಿಯವರಿಗೆ ಟಿಪ್ಪಣಿ ಬರೆದಿದ್ದಾರೆ. ಅದನ್ನು ಆಧರಿಸಿ, ಒಂದು ತಿಂಗಳಾದ ಮೇಲೆ ಪತ್ರ ಮುಡಾ ಆಯುಕ್ತರಿಗೆ ಹೋಗಿದೆ ಎಂದು ವಿವರಿಸಿದರು.
ಮುಡಾದಲ್ಲಿ 24-07-1997 ರಂದು ಈ ಜಾಗ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ಪಾಸ್ ಮಾಡಿದ್ದಾರೆ. 30-08-1997ರಂದು ಸದರಿ ಜಾಗಗಳನ್ನು ಭೂಸ್ವಾಧೀನದಿಂದ ಕೈಬಿಡಲು ಮುಡಾ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಸದರಿ ಶಿಫಾರಸ್ಸನ್ನು ಆಧರಿಸಿ, ಭೂಸ್ವಾಧೀನ ಮಾಡಿದ ಜಮೀನುಗಳನ್ನು ಡಿ-ನೋಟಿಫೈ ಮಾಡಲು ಆಗ ರೆವಿನ್ಯೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ಬಾಲಸುಬ್ರಮಣ್ಯನ್ ಅಧ್ಯಕ್ಷತೆಯ ಸಮಿತಿ ಪರಿಶೀಲಿಸಿ ಡಿನೋಟಿಫೈ ಮಾಡಿದೆ.
ಈ 3 ಜನರ ಸಮಿತಿಯು ಬೆಂಗಳೂರಿನಲ್ಲಿ ಬಿಡಿಎಯ ಯಡಿಯೂರು-ನಾಗಸಂದ್ರ, ಮೈಸೂರಿನ ಮುಡಾದ ಕೆಸರೆ ಸೇರಿದಂತೆ ಸುಮಾರು 19 ಕಡೆ ಡಿನೋಟಿಫೈ ಮಾಡಲು ಅನುಮೋದನೆ ಮಾಡಿರುತ್ತದೆ ಎಂದು ತಿಳಿಸಿದರು.