ಕರ್ನಾಟಕ

karnataka

ETV Bharat / state

ಡೆಂಗ್ಯೂ ಪತ್ತೆ ಮತ್ತು ಚಿಕಿತ್ಸೆಯನ್ನು ಗಂಭೀರವಾಗಿ ಪರಿಗಣಿಸಿ: ಸಿಎಂ ಸೂಚನೆ - Dengue In Karnataka

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

By ETV Bharat Karnataka Team

Published : Jun 25, 2024, 9:55 PM IST

ಸಿಎಂ ಸಿದ್ದರಾಮಯ್ಯ ಸಭೆ
ಸಿಎಂ ಸಿದ್ದರಾಮಯ್ಯ ಸಭೆ (ETV Bharat)

ಬೆಂಗಳೂರು:ಡೆಂಗ್ಯೂ ಪತ್ತೆ ಮತ್ತು ಚಿಕಿತ್ಸೆಯನ್ನು ಗಂಭೀರವಾಗಿ ಪರಿಗಣಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು.

ಅಗತ್ಯ ಚಿಕಿತ್ಸೆ, ಚುಚ್ಚುಮದ್ದು, ಪ್ಲೇಟ್‌ಲೆಟ್ಸ್​ಗಳ ಸಂಗ್ರಹಿಸಬೇಕು. ರಾಜ್ಯದಲ್ಲಿ ನಿನ್ನೆಯವರೆಗೆ ಒಟ್ಟು 5374 ಪ್ರಕರಣ ವರದಿಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಭಾರತ ಸರ್ಕಾರವು ಡೆಂಗ್ಯೂ ಪ್ರಕರಣಗಳಲ್ಲಿ ಮರಣ ಪ್ರಮಾಣ ಶೇ.0.5ನ್ನು ಮೀರುವಂತಿಲ್ಲ ಎಂದು ನಿಗದಿ ಪಡಿಸಿದೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ0.09 ರಷ್ಟಿದೆ. ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಾಣಿಸಿಕೊಂಡಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1230 ಪ್ರಕರಣಗಳು ವರದಿಯಾಗಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳು, ಔಷಧಿಗಳು ಲಭ್ಯವಿರುವುದನ್ನು ಖಾತರಿಪಡಿಸಲು ಸಿಎಂ ಸೂಚಿಸಿದರು.

ಆಶಾ ಕಾರ್ಯಕರ್ತೆಯರು, ನರ್ಸಿಂಗ್‌ ವಿದ್ಯಾರ್ಥಿಗಳು, ಎನ್.ಎಸ್.ಎಸ್. ವಿದ್ಯಾರ್ಥಿಗಳು ಮತ್ತಿತರ ಸ್ವಯಂ ಸೇವಕರ ನೆರವಿನೊಂದಿಗೆ ಮನೆ ಮನೆ ಸಮೀಕ್ಷೆ ನಡೆಸಿ ಅರಿವು ಮೂಡಿಸಲು ಸೂಚಿಸಲಾಗಿದೆ. ಪ್ರತಿ ಶುಕ್ರವಾರ ರೋಗ ಹರಡುವ ಮೂಲ ಪತ್ತೆ ಮತ್ತು ನಾಶ ವಿಶೇಷ ಅಭಿಯಾನ ಮಾಡಲಾಗುವುದು. ಪ್ರತಿ ವಾರ ಬಿಬಿಎಂಪಿ, ನಗರಾಭಿವೃದ್ಧಿ ಮತ್ತು ಆರೋಗ್ಯ ಇಲಾಖೆಯವರು ಜಂಟಿಯಾಗಿ ಡೆಂಗ್ಯೂ ನಿಯಂತ್ರಣ ಕುರಿತು ಪರಿಶೀಲನೆ ನಡೆಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡುವುದು ಅತಿ ಅಗತ್ಯ. ಡೆಂಗ್ಯೂ ಈಡಿಸ್‌ ಈಜಿಪ್ಟೈ ಎಂಬ ಸೊಳ್ಳೆಯಿಂದ ಹರಡುತ್ತದೆ. ಇದರ ಲಾರ್ವಾ ಮತ್ತು ಮೊಟ್ಟೆಗಳನ್ನು ಮೂಲದಲ್ಲಿಯೇ ನಾಶ ಮಾಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಅರಿವು ಮೂಡಿಸಲು ಸೂಚಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯೆಲ್‌, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಉಮಾಶಂಕರ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ್‌ ಗುಪ್ತಾ, ಆಯುಕ್ತ ಡಿ.ರಂದೀಪ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಡೆಂಗ್ಯೂ ಜ್ವರ ಹೆಚ್ಚಳ: ಆರೋಗ್ಯ ಇಲಾಖೆಯ ಸಲಹೆಗಳೇನು? - Dengue cases are on the rise

ABOUT THE AUTHOR

...view details