ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರೇ, ಎದೆ ಮೇಲೆ ಕೈಯಿಟ್ಟು ಆತ್ಮಸಾಕ್ಷಿಗೆ ಕಿವಿಕೊಟ್ಟು ಹೇಳಿ, ನೀವು ನಿಜವಾಗಿ ರೈತರ ಹಿತೈಷಿಯಾ? ಹಿತಶತ್ರುವಾ? ರೈತರ ಪಾಲಿನ ಮರಣ ಶಾಸನದಂತಿದ್ದ ಕೃಷಿ ಕ್ಷೇತ್ರದ ಐದು ಕರಾಳ ಕಾಯಿದೆಗಳನ್ನು ಬಲವಂತವಾಗಿ ಜಾರಿಗೊಳಿಸಲು ಪ್ರಯತ್ನಿಸಿದವರು ಯಾರು? ಮಳೆ-ಚಳಿ-ಗಾಳಿಯನ್ನು ಲೆಕ್ಕಿಸದೆ ಪ್ರತಿಭಟನೆಗಿಳಿದ ರೈತರು ದೆಹಲಿಗೆ ಬರದಂತೆ ರಸ್ತೆ ಮೇಲೆ ಮುಳ್ಳು ನೆಟ್ಟು, ಗುಂಡಿ ತೋಡಿ ಹಿಂದಕ್ಕೆ ಓಡಿಸುವ ಕುಟಿಲ ಕಾರಸ್ತಾನಗಳನ್ನು ಮಾಡಿದ್ದು ಯಾರು? ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಲ್ಲಿ ಸುಮಾರು 700 ಅಮಾಯಕರು ಪೊಲೀಸರ ದೌರ್ಜನ್ಯ, ಸರ್ಕಾರದ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಾಗ ಕನಿಷ‍್ಠ ಸಂತಾಪವನ್ನೂ ಸೂಚಿಸದ ನಿಮಗೆ ರೈತರ ಸಮ್ಮಾನ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?.
ನಮ್ಮ ರಾಜ್ಯದಲ್ಲಿ ನೆರೆ ಬಂದಾಗ ಬರಲಿಲ್ಲ, ಬರ ಬಿದ್ದಾಗ ಬರಲಿಲ್ಲ, ಬೆಳೆ ಕಳೆದುಕೊಂಡ ಬರಗಾಲ ಪೀಡಿತ ಪ್ರದೇಶದ ರೈತರಿಗೆ ಪರಿಹಾರ ನೀಡಲಿಲ್ಲ. ನಾನೇ ಖುದ್ದಾಗಿ ದೆಹಲಿಗೆ ಬಂದು ಭೇಟಿ ಮಾಡಿ ಮನವಿ ಕೊಟ್ಟರೂ ಇಲ್ಲಿಯ ವರೆಗೆ ಪೈಸೆ ಹಣ ನೀಡಿಲ್ಲ. ಈ ರೀತಿಯ ರೈತ ವಿರೋಧಿ ಧೋರಣೆ ಇಟ್ಟುಕೊಂಡ ನೀವು ಚುನಾವಣೆ ಕಾಲದಲ್ಲಿ ಮಾತ್ರ ತಪ್ಪದೆ ಹಾಜರಾಗಿ ರೈತರ ಪರ ಪ್ರೀತಿ-ಕಾಳಜಿಯ ಮಳೆ ಸುರಿಸಿದರೆ ರಾಜ್ಯದ ರೈತರು ನಿಮ್ಮನ್ನು ನಂಬುತ್ತಾರೆ ಎಂದು ತಿಳಿದುಕೊಂಡಿದ್ದಿರಾ ಎಂದು ಪ್ರಶ್ನಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನನ್ನಾಗಿ ಮಾಡಬೇಕೆಂಬ ರೈತರ ಬೇಡಿಕೆಯನ್ನು ಇನ್ನೂ ಈಡೇರಿಸಲು ನೀವು ಸಿದ್ಧರಿಲ್ಲ. ರಸಗೊಬ್ಬರದ ಬೆಲೆಯನ್ನು ಏರಿಸುತ್ತಲೇ ಇದ್ದೀರಿ, ಬೀಜ-ಗೊಬ್ಬರ ಮೇಲೆ ಜಿಎಸ್‌ಟಿ ಹೇರಿಕೆ ಮಾಡಿದ್ದೀರಿ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರ ಭೂಮಿಯನ್ನು ಕಾರ್ಪೋರೇಟ್ ಕುಳಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸಿರುವ ನಿಮ್ಮನ್ನು ಯಾವ ರೈತ ತಮ್ಮ ಹಿತಚಿಂತಕ ಎಂದು ನಂಬುತ್ತಾರೆ ಹೇಳಿ?.
ಬಿಜೆಪಿ ರೈತ ವಿರೋಧಿ:ನಿಮ್ಮ ಭಾರತೀಯ ಜನತಾ ಪಕ್ಷ ಹುಟ್ಟಿನಿಂದಲೇ ರೈತ ವಿರೋಧಿ. ಅದು ಬಂಡವಾಳಿಗರು, ಉದ್ಯಮಿಗಳು ಮತ್ತು ವರ್ತಕರ ಪಕ್ಷ. ಈ ಪಕ್ಷದ ಡಿಎನ್ಎನಲ್ಲಿಯೇ ರೈತ ವಿರೋಧಿ ವಿಷ ಇದೆ. ನರೇಂದ್ರ ಮೋದಿ ಅವರೇ? ನೀವು ಪ್ರಧಾನಿಯಾದ ಹತ್ತು ವರ್ಷಗಳ ಅವಧಿಯಲ್ಲಿ ರಾಜ್ಯದ ರೈತರಿಗೆ ನೀವು ನೀಡಿರುವ ಕೊಡುಗೆ ಏನು? ಕಾವೇರಿ-ಕೃಷ್ಣ ನದಿನೀರು ಹಂಚಿಕೆಯಲ್ಲಿ ದ್ರೋಹ, ಮಹದಾಯಿ-ಮೇಕೆದಾಟು ಯೋಜನೆಗಳಲ್ಲಿ ಮೋಸ, ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ನೀಡುವ ಭರವಸೆ ನೀಡಿ ವಂಚನೆ, ಬರಪರಿಹಾರಕ್ಕೆ ಹಣ ನೀಡಲು ನಿರಾಕರಣೆ. ಇದೇನಾ ನಿಮ್ಮ ರೈತ ಪ್ರೀತಿ? ಇದೇನಾ ಕಿಸಾನ್ ಸಮ್ಮಾನ್? ಎಂದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಪಕ್ಷದ ರಾಜ್ಯ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳೊಳಗೆ ಹಾವೇರಿಯಲ್ಲಿ ಬೀಜ-ಗೊಬ್ಬರ ಕೇಳಿದ ರೈತರಿಗೆ ಗುಂಡಿಟ್ಟು ಸಾಯಿಸಿದರು. ಸಾಲ ಮನ್ನಾ ಮಾಡಿ ಎಂದು ರೈತರು ಕೇಳಿದರೆ "ನಾನೇನು ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿದೇನಾ?" ಎಂದು ವಿಧಾನಮಂಡಲದಲ್ಲಿ ಕೇಳಿದ್ದರು.
ಇದೇನಾ ನಿಮ್ಮ ಪಕ್ಷದ ರೈತರ ಬಗೆಗಿನ ಕಾಳಜಿ?. ರಾಜ್ಯದಲ್ಲಿ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ತಿದ್ದುಪಡಿ, ಭೂಸುಧಾರಣಾ ಕಾಯ್ದೆಗೂ ತಿದ್ದುಪಡಿ ತರುವ ಪ್ರಯತ್ನ ಮಾಡಿತ್ತು. ಇದೇನಾ ನಿಮ್ಮ ರೈತ ಪರ ಸರ್ಕಾರ? ಎಂದು ಪ್ರಶ್ನಿಸಿದ್ದಾರೆ.
2017ರಲ್ಲಿಯೂ ರಾಜ್ಯದಲ್ಲಿ ಬರಗಾಲ ಇತ್ತು. ಇದರಿಂದ ಕಷ್ಟ-ನಷ್ಟಕ್ಕೀಡಾಗಿದ್ದ ರೈತರನ್ನು ರಕ್ಷಿಸಲಿಕ್ಕಾಗಿ ನಾನು ರೈತರ 50,000 ರೂಪಾಯಿ ವರೆಗಿನ ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದ್ದೆ. ಇದರಿಂದ ರಾಜ್ಯದ 22.27 ಲಕ್ಷ ರೈತರ ರೂ. 8,165 ಕೋಟಿಯಷ್ಟು ಸಾಲ ಮನ್ನಾ ಆಗಿದೆ.