ಬೆಂಗಳೂರು:ನಾವು ಯಾವುದೇ ನಿರ್ದಿಷ್ಟ ಜಾತಿ, ಧರ್ಮ, ಸಮುದಾಯದ ವಿರುದ್ಧವಿಲ್ಲ, ನಮ್ಮದು ಸಂವಿಧಾನ ಪರವಾದ ನಿಲುವು. ಜ್ಞಾನವಂತ ಕನ್ನಡಿಗರು ಶಾಂತಿ, ಸಂಯಮದ ಮೂಲಕ ಕೋಮುವಾದಿಗಳ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯದ ಕೆರಗೋಡು ಗ್ರಾಮದಲ್ಲಿ ನಡೆದ ಘಟನೆ ಸಂಬಂಧ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಗೌರಿಶಂಕರ ಸೇವಾ ಟ್ರಸ್ಟ್ನವರು ಕೆರಗೋಡು ರಂಗಮಂದಿರದ ಆವರಣದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಆ ಧ್ವಜಸ್ತಂಭವನ್ನು ಕರ್ನಾಟಕದ ಧ್ವಜ ಮತ್ತು ತ್ರಿವರ್ಣ ಧ್ವಜ ಹಾರಿಸುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡುತ್ತೇವೆ. ಜೊತೆಗೆ ಗ್ರಾಮ ಪಂಚಾಯತಿಯ ಷರತ್ತುಗಳಿಗೆ ಬದ್ಧರಾಗಿರುವುದಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದರು ಎಂದು ಸಿಎಂ ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರ ಮನವಿಯ ಮೇರೆಗೆ ಗ್ರಾಮ ಪಂಚಾಯತಿಯವರು ಧ್ವಜಸ್ತಂಭ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ. ಆ ನಂತರ ಅಲ್ಲಿ ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಆ ಜಾಗದಲ್ಲಿ ಹನುಮಧ್ವಜವನ್ನು ಹಾರಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಧ್ವಜ ಇಳಿಸುವಂತೆ ಜನರಿಗೆ ತಿಳಿ ಹೇಳಿದ್ದಾರೆ. ಆದರೆ, ಸ್ಥಳೀಯರು ಪೊಲೀಸರ ಹಾಗೂ ಜಿಲ್ಲಾಡಳಿತದ ಮನವಿಯನ್ನು ತಿರಸ್ಕರಿಸಿ, ಪ್ರತಿಭಟನೆ, ಸಂಘರ್ಷಕ್ಕೆ ಇಳಿಯುವ ಮೂಲಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ.