ಕರ್ನಾಟಕ

karnataka

ETV Bharat / state

10 ವರ್ಷದಲ್ಲಿ ಪ್ರಧಾನಿ ಮೋದಿ ಆಡಳಿತ ಶೂನ್ಯ: ಸಿಎಂ ಸಿದ್ದರಾಮಯ್ಯ - CM Siddaramaiah - CM SIDDARAMAIAH

ದಾವಣಗೆರೆಯಲ್ಲಿ ನಡೆದ ಕುರುಬ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (Etv Bharat)

By ETV Bharat Karnataka Team

Published : May 4, 2024, 10:53 PM IST

ದಾವಣಗೆರೆ:ಪ್ರಧಾನಿ ನರೇಂದ್ರಮೋದಿ ಸ್ವಾತಂತ್ರ್ಯ ಬಂದ ಬಳಿಕ ಜನಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. 10 ವರ್ಷದ ಆಡಳಿತದಲ್ಲಿ ದೇಶದ ಜನರಿಗಾಗಿ ಏನೂ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ನಡೆದ ಕುರುಬ ಸಮಾವೇಶದಲ್ಲಿ ಮಾತನಾಡಿದ ಅವರು, ಎನ್​ಡಿಎ ಅಧಿಕಾರಕ್ಕೆ ಬರಬೇಕಾ?, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಬೇಕಾ?, 10 ವರ್ಷಗಳಿಂದ ಮೋದಿ ಪ್ರಧಾನಿ ಆಗಿದ್ದಾರೆ. ಹತ್ತು ವರ್ಷಗಳಲ್ಲಿ ಬಡವರ ಅಭಿವೃದ್ಧಿಗೆ ಏನೂ ಮಾಡಿಲ್ಲ. ಹಿಂದುಳಿದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏನೂ ಮಾಡಿಲ್ಲ. ದೇಶದ ಜನರಿಗೆ ಬರೀ ಸುಳ್ಳು ಹೇಳಿದ್ದಾರೆ. ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಧರ್ಮ, ಹಿಂದುತ್ವ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ, ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಟೀಕಿಸಿದರು.

ದೇಶದ ಐಕ್ಯತೆಗಾಗಿ ರಾಹುಲ್​ ಯಾತ್ರೆ:ರಾಹುಲ್ ಗಾಂಧಿ ದೇಶದ ಐಕ್ಯತೆಗಾಗಿ ಯಾತ್ರೆ ಮಾಡಿದ್ದಾರೆ. ದೇಶದ ಉದ್ದಕ್ಕೂ ಪಾದಯಾತ್ರೆ ಮಾಡಿದ್ದಾರೆ. ಸ್ವತಂತ್ರ ಬಂದ ಬಳಿಕ ದೊಡ್ಡಮಟ್ಟದಲ್ಲಿ ನಡೆದ ಪಾದಯಾತ್ರೆ ಇದಾಗಿದೆ. ನಾನು ಸಹ ಬಳ್ಳಾರಿ ಪಾದಯಾತ್ರೆ ಮಾಡಿದ್ದೆ. ದೇಶದ ಸಮೈಕ್ಯತೆಗಾಗಿ ಕಾಂಗ್ರೆಸ್ ಯಾತ್ರೆ ಮಾಡಿದೆ ಎಂದರು.

ಕೇಂದ್ರ ಸರ್ಕಾರ 10 ವರ್ಷದಲ್ಲಿ ಯಾವ ಅಭಿವೃದ್ಧಿ ಮಾಡಿದೆ. ಸುಳ್ಳು ಹೇಳಿದ್ದಕ್ಕೆ ಬಿಜೆಪಿಗೆ ಮತ ಹಾಕಬೇಕಾ. ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಉದ್ಯೋಗ ಸೃಷ್ಟಿ ಆಗಲಿಲ್ಲ. ಬೆಲೆ ಇಳಿಕೆ ಆಗಲಿಲ್ಲ. ರೈತರ ಸಾಲ ಮನ್ನಾ ಆಗಲಿಲ್ಲ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಕಾಂಗ್ರೆಸ್ ಪಕ್ಷ ರೈತರು, ದಲಿತರು, ಬಡವರು, ಹಿಂದುಳಿದವರಿಗೆ ಸಹಾಯ ಮಾಡಿದೆ ಎಂದರು.

ಮೋದಿ ನನಗಿಂತ ಚಿಕ್ಕವರು:ಜನಸಂಘ ಹುಟ್ಟಿದ್ದೇ 1950ರಲ್ಲಿ. 1980ರಲ್ಲಿ ಬಿಜೆಪಿ ರಚನೆಯಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಭಾಗಿಯಾಗಿಲ್ಲ. ಹಿಂದುಳಿದವರಿಗೆ ಮೀಸಲಾತಿ ಕೊಟ್ಟಾಗ ಬಿಜೆಪಿ ವಿರೋಧ ಮಾಡಿತ್ತು. ಮೀಸಲಾತಿಗೆ ಬಿಜೆಪಿ ವಿರೋಧವಿದೆ. ಬಿಜೆಪಿಯ ಉಪಾಧ್ಯಕ್ಷ ರಾಮಾ ಜೋಯಿಸರು ವಿರೋಧಿಸಿದ್ದರು. ಬಿಜೆಪಿಗೆ ಹಿಂದುಳಿದವರು ಮತ ಹಾಕಲು ಆಗುತ್ತದೆಯೇ. ಮೋದಿ ವಯಸ್ಸಿನಲ್ಲಿ ನನಗಿಂತ ಚಿಕ್ಕವರು ಎಂದು ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ವಿನಯ್ ಕುಮಾರ್ ಪಕ್ಷೇತರ ಸ್ಪರ್ಧೆ ಬೇಡ ಎಂದು ಹೇಳಿದ್ದೆ. ಇದರಿಂದ ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸಿದಂತೆ ಆಗುತ್ತದೆ. ಕನಕ ಗುರುಪೀಠ ಶ್ರೀಗಳ ಜತೆ ನಮ್ಮ ಮನೆಗೆ ಬಂದಿದ್ದರು. ಸ್ಪರ್ಧಿಸಲ್ಲ ಎಂದು ಹೇಳಿ ಹೋಗಿ, ಯಾರದ್ದೋ ಕುಮ್ಮಕ್ಕಿನಿಂದ ವಿನಯ್ ಈಗ ಸ್ಪರ್ಧೆ ಮಾಡಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆ, ಶೀಘ್ರ ಪ್ರಜ್ವಲ್​ ಬಂಧಿಸಲು ಕ್ರಮ: ಸಿಎಂಗೆ ಎಸ್​ಐಟಿ ಮಾಹಿತಿ - HASSAN PEN DRIVE CASE

ABOUT THE AUTHOR

...view details