ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಅಕಾಂಕ್ಷಿಗಳ ಪಟ್ಟಿ ಹಿಗ್ಗಿದ್ದು, ಟಿಕೆಟ್ ವಿಚಾರದಲ್ಲಿ ಯಾರಿಗೂ ಅಸಮಾಧಾನವಾಗಂತೆ ಓಲೈಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಜೂನ್ 2ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ಜೂನ್ 13ರ ಗುರುವಾರ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ದೈವಾರ್ಷಿಕ ಚುನಾವಣೆ ನಡೆಯಲಿದೆ. 11 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಗೆ ಜೂನ್ 3 ಕಡೇಯ ದಿನವಾಗಿದೆ. ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಜೂನ್ 2ರ ಭಾನುವಾರ ಸಂಜೆ 6.00 ಗಂಟೆಗೆ ಅರಮನೆ ರಸ್ತೆಯ ಸಿ.ಒ.ಡಿ. ಕಚೇರಿ ಮುಂಭಾಗದಲ್ಲಿರುವ ಹೋಟೆಲ್ ಏಟ್ರಿಯಾದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಸಿಎಂ ಕಾರ್ಯದರ್ಶಿ ಈ ತುಕಾರಾಂ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದಾರೆ. ರಾಜ್ಯ ಕೆ.ಪಿ.ಸಿ.ಸಿ. ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನ ಪರಿಷತ್ತಿನ ಸಭಾ ನಾಯಕ ಎನ್.ಎಸ್.ಭೋಸರಾಜು ಹಾಗೂ ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರುಗಳು ಈ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಎಲ್ಲಾ ಸದಸ್ಯರುಗಳು ತಪ್ಪದೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಬೇಕೆಂದು ಶಾಸಕರಿಗೆ ಪತ್ರ ರವಾನಿಸಲಾಗಿದೆ.
ಕಾಂಗ್ರೆಸ್ಗೆ 7 ಸ್ಥಾನ:ಪರಿಷತ್ನ 11 ಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ 7 ಸ್ಥಾನ ಲಭ್ಯವಾಗಿದೆ. ಈ ಸ್ಥಾನಕ್ಕೆ ಈಗಾಗಲೇ 40 ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಜೊತೆಗೆ, ನಿವೃತ್ತಿಯಾಗುವ ನಾಲ್ವರಲ್ಲಿ ಕೆಲವರು ತಮ್ಮ ಅವಧಿಯನ್ನು ಮುಂದುವರೆಸುವಂತೆ ಕೂಡ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನಲೆ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ವಿಚಾರದ ಕುರಿತು ಈಗಾಗಲೇ ಸಿಎಂ ಮತ್ತು ಡಿಸಿಎಂ ಹೈ ಕಮಾಂಡ್ಗೆ ಶಾರ್ಟ್ ಲಿಸ್ಟ್ ಕಳುಹಿಸಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಟಿಕೆಟ್ ಹಂಚಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಹೈಕಮಾಂಡ್ ಸಂದೇಶದ ಕುರಿತು ಪ್ರಸ್ತಾಪವಾಗಲಿದೆ. ಅಡ್ಡ ಮತದಾನದಂತಹ ಪ್ರಯತ್ನಗಳು ನಡೆಯದಂತೆ ಮುನ್ನೆಚ್ಚರಿಕೆ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಪರಿಷತ್ಗೆ 300ಕ್ಕೂ ಹೆಚ್ಚು ಆಕಾಂಕ್ಷಿಗಳು, ಟಿಕೆಟ್ ಹಂಚಿಕೆ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು: ಡಿಕೆಶಿ