ಕರ್ನಾಟಕ

karnataka

ETV Bharat / state

ತಾವು ಕಲಿತ ಸಿದ್ದರಾಮನಹುಂಡಿ, ಕುಪ್ಪೆಗಾಲ ಶಾಲೆಗಳಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಸಿಎಂ - Siddaramanahundi School

'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲಾ ಮಕ್ಕಳ ಜೊತೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಂವಾದ ನಡೆಸಿದರು.

CM's interaction with government school children
ಸರ್ಕಾರಿ ಶಾಲಾ ಮಕ್ಕಳ ಜೊತೆ ಸಿಎಂ ಸಂವಾದ

By ETV Bharat Karnataka Team

Published : Mar 5, 2024, 4:06 PM IST

ತಾವು ಕಲಿತ ಸಿದ್ದರಾಮಯ್ಯನಹುಂಡಿ, ಕುಪ್ಪೆಗಾಲ ಶಾಲೆಗಳಿಗೆ ಸಿಎಂ 10 ಲಕ್ಷ ರೂ. ದೇಣಿಗೆ

ಬೆಂಗಳೂರು: ತಾವು ಕಲಿತಿರುವ ಸಿದ್ದರಾಮನಹುಂಡಿ ಹಾಗೂ ಕುಪ್ಪೆಗಾಲ ಶಾಲೆಗೆ ಸಿಎಂ ಸಿದ್ದರಾಮಯ್ಯ 10 ಲಕ್ಷ ರೂಗಳ ದೇಣಿಗೆ ನೀಡಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮೈಸೂರಿನಿಂದ 'ನಮ್ಮ ಶಾಲೆ ನಮ್ಮ ಜವಾಬ್ದಾರಿ' - ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಓದಿದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಪ್ಪೇಗಾಲ ಮತ್ತು ಕೆಪಿಎಸ್ ಸಿದ್ದರಾಮನಹುಂಡಿ ಇಲ್ಲಿಗೆ 10 ಲಕ್ಷ ರೂ. ಗಳ ದೇಣಿಗೆ ನೀಡಿದರು. ನಂತರ ಮಾತನಾಡಿದ ಅವರು, "ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಜ್ಞಾನದ ವಿಕಾಸವಾಗಬೇಕು" ಎಂದು ಮಕ್ಕಳಿಗೆ ಸಲಹೆ ನೀಡಿದರು.

ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಕಲಿತ ಸಿದ್ದರಾಮನಹುಂಡಿ ಹಾಗೂ ಕುಪ್ಪೆಗಾಲ ಸರ್ಕಾರಿ ಶಾಲೆಯ ಮಕ್ಕಳೊಡನೆ ಸಂವಾದ ನಡೆಸಿದರು. "ಸಂವಿಧಾನವನ್ನು ಅರಿತುಕೊಳ್ಳಬೇಕು" ಎಂದ ಮುಖ್ಯಮಂತ್ರಿ, "ಸಂವಿಧಾನ ಏನು ಹೇಳುತ್ತದೆ ಹೇಳಿ ನೋಡೋಣ" ಎಂದು ಮಕ್ಕಳನ್ನು ಕೇಳಿದಾಗ, ಮಕ್ಕಳು ಸಂವಿಧಾನದ ಪೂರ್ಣ ಪೀಠಿಕೆಯನ್ನು ಹೇಳಿದರು. "ಕೇವಲ ಕಂಠಪಾಠ ಮಾಡಿದರೆ ಸಾಲದು, ಅದರ ತಿರುಳನ್ನು ಅರಿತು ಅದರಂತೆ ನಡೆಯಬೇಕು" ಎಂದರು.

"ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ತಿರುಳು. ಸಮಾನತೆ ಸಮಸಮಾಜ ನಿರ್ಮಾಣವಾಗಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರು ಇದನ್ನೇ ಹೇಳಿಕೊಂಡು ಬಂದಿದ್ದರೂ ಇದು ಪೂರ್ಣವಾಗಿ ನೆರವೇರಿಲ್ಲ. ಇದೆಲ್ಲವನ್ನು ಓದಿ ಅರ್ಥ ಮಾಡಿಕೊಂಡು, ಮಕ್ಕಳು ಮನುಷ್ಯತ್ವ ಬೆಳೆಸಿಕೊಳ್ಳಬೇಕು" ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

"ಸರ್ಕಾರಿ ಶಾಲೆಗಳಲ್ಲಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಯ ಅಭಿವೃದ್ಧಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಸಂವಿಧಾನ ಜಾರಿಗೆ ಬಂದ ನಂತರ ಉಚಿತ ಶಿಕ್ಷಣವನ್ನು ಮೂಲ ಹಕ್ಕನ್ನಾಗಿ ಮಾಡಿದೆ. ಹಾಗಾಗಿ ಎಲ್ಲರಿಗೂ ಶಿಕ್ಷಣ ಕಡ್ಡಾಯವಾಗಿದೆ" ಎಂದು ಮಕ್ಕಳಿಗೆ ತಿಳಿ ಹೇಳಿದರು.

ನಿಮಗಿರುವ ಸೌಲಭ್ಯ ನಮಗಿರಲಿಲ್ಲ:"ನಾನು ಓದುವಾಗ ಸಂವಿಧಾನ ಜಾರಿಗೆ ಬಂದಿತ್ತು. ನಾನು ಹುಟ್ಟಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ನಂಜೇಗೌಡ ಎಂಬುವರು ನನಗೆ ಅಕ್ಷರಾಭ್ಯಾಸ ಮಾಡಿಸಿದರು. ಕನ್ನಡ ಓದು, ಬರೆಯುವುದು, ಲೆಕ್ಕ ಹೇಳಿಕೊಟ್ಟಿದ್ದರು. ಅವರು ಶಾಲೆ ಬಿಟ್ಟ ನಂತರ ಎಮ್ಮೆ ಮೇಯಿಸುತ್ತಿದ್ದ ನನ್ನನ್ನು ರಾಜಪ್ಪ ಎಂಬ ಮೇಷ್ಟ್ರು ಮನೆಗೆ ಬಂದು ನೇರವಾಗಿ 5 ನೇ ತರಗತಿಗೆ ಸೇರಿಸಿದ್ದರು. 8ನೇ ತರಗತಿ ಓದಲು ಕುಪ್ಪೆಗಾಲಕ್ಕೆ ಹೋಗುತ್ತಿದ್ದೆ. ಪ್ರೌಢ ಶಾಲೆಗೆ ವಿದ್ಯಾವರ್ಧಕ ಶಾಲೆಗೆ ಸೇರಿದ್ದೆ. ನಿಮಗಿರುವ ಸೌಲಭ್ಯ ನಮಗಿರಲಿಲ್ಲ. ಶಾಲೆಯ ದಾಖಲೆಗಳಲ್ಲಿ ನನ್ನ ಹುಟ್ಟಿದ ದಿನಾಂಕ 3-8-1947 ಎಂದು ನಮೂದಾಗಿದೆ" ಎಂದು ಸಿಎಂ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು.

"ಈಗ ಸರ್ಕಾರ ಹಾಲು, ಮೊಟ್ಟೆ, ಚಿಕ್ಕಿ, ಬಿಸಿಯೂಟ, ಸಮವಸ್ತ್ರ ಕೊಡುತ್ತಿದೆ. ನಮ್ಮ ಕಾಲದಲ್ಲಿ ಶಿಕ್ಷಕರಿಂದ ಏಟನ್ನೂ ತಿನ್ನುತ್ತಿದ್ದೆವು. ಅಂದಿನ ಹೆಣ್ಣು ಮಕ್ಕಳು ಹೆಚ್ಚಾಗಿ ಓದುತ್ತಿರಲಿಲ್ಲ. ಈಶ್ವರಾಚಾರ್ ಹೇಳಿಕೊಟ್ಟಿದ್ದ ಕನ್ನಡ ವ್ಯಾಕರಣವನ್ನು ನಾನು ಈಗಲೂ ಮರೆತಿಲ್ಲ" ಎಂದರು.

ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, "6 ಕೋಟಿ ರೂ.ಗಳನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳು ನೀಡಿದ್ದಾರೆ. ಮಾಲೂರಿನಲ್ಲಿಯೂ ಕೂಡ ಆರು ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳವರು ಮಕ್ಕಳಿಗೆ ಪಾಠವನ್ನೂ ಮಾಡಿದ್ದಾರೆ. 48,000 ಸರ್ಕಾರಿ ಶಾಲೆಗಳಲ್ಲಿ 14,000 ವಾಟ್ಸ್​ ಆ್ಯಪ್​ ಗುಂಪುಗಳಾಗಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತು ದೊಡ್ಡ ಗುರಿಯನ್ನು ಹೊಂದಿದ್ದೇವೆ. 44 ಸಾವಿರ ಕೋಟಿ ರೂ.ಗಳನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಸಿಎಸ್​ಆರ್​ನಿಂದಲೂ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ" ಎಂದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಉನ್ನತ ಶಿಕ್ಷಣ ಸಚಿವ ಸುಧಾಕರ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ:ವೃಷಭಾವತಿ ವ್ಯಾಲಿ ಯೋಜನೆ, ವಿವಿಧ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ABOUT THE AUTHOR

...view details