ಮಾ.6ರಂದು ಅಥಣಿ ತಾಲೂಕಿಗೆ ಸಿಎಂ, ಡಿಸಿಎಂ ಭೇಟಿ: ಶಾಸಕ ಲಕ್ಷ್ಮಣ ಸವದಿ ಚಿಕ್ಕೋಡಿ: ಮಾರ್ಚ್ 6ರಂದು ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಲಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಮಾಹಿತಿ ನೀಡಿದರು.
ಈ ಬಗ್ಗೆ ಕೊಟ್ಟಲಗಿ ಗ್ರಾಮದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಈಗಾಗಲೇ ಮಂಜೂರು ಆಗಿದ್ದು, ಟೆಂಡರ್ ಪ್ರಕ್ರಿಯೆ ಮುಗದಿದೆ. ಯೋಜನೆಯ ಭೂಮಿ ಪೂಜೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಕೆಲ ಸಚಿವರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಆ ದಿನದಂದು ರೈತರು ಸಿಎಂಗೆ ಅಭಿನಂದನೆಯನ್ನೂ ಸಲ್ಲಿಸಲಿದ್ದಾರೆ. ಎಲ್‌ಟಿ ಲೈನ್ ಮಾಡಿಕೊಂಡು ಪಂಪ್‌ಸೆಟ್ ಬಳಸುತ್ತಿದ್ದ ರೈತರಿಗೆ ಕರೆಂಟ್ ಬಿಲ್ ಹೊರೆಯಾಗುತ್ತಿತ್ತು. ಇದನ್ನು ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಅದರಂತೆ ನಮ್ಮ ಸರ್ಕಾರ ಎರಡು ರೂಪಾಯಿ ಇಳಿಸಿ ರೈತರ ಹೊರೆ ಕಡಿಮೆ ಮಾಡಿದೆ. ಹೀಗಾಗಿ ಪಂಪ್‌ಸೆಟ್ ಬಳಸುವ ರೈತರು ಸಹ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಬಳಿಕ ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಬಿಜೆಪಿ ಖಾಸಗಿ ಎಫ್‌ಎಸ್‌ಎಲ್ ವರದಿ ಬಹಿರಂಗ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ಇಲ್ಲಿ ಪಕ್ಷಗಳಿಂದ ರಿಪೋರ್ಟ್ ಬರುವುದಿಲ್ಲ. ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲಿ ಪರೀಕ್ಷೆ ನಡೆದು ಬಳಿಕ ವರದಿ ಬರುತ್ತದೆ. ಈಗಾಗ್ಲೆ ಸಿಎಂ, ಡಿಸಿಎಂ, ಗೃಹ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಯಾರೇ ಆಗಿರಲಿ, ಅವರನ್ನು ನಮ್ಮ ಸರ್ಕಾರ ಬಗ್ಗುಬಡಿಯುವ ಕೆಲಸ ಮಾಡುತ್ತೆ. ಕಾಂಗ್ರೆಸ್ ಸರ್ಕಾರ ಯಾವುದೇ ಮುಲಾಜಿಗೇ ಒಳಗಾಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದೆ ಎಂಬ ವಿಪಕ್ಷ ನಾಯಕ ಆರ್. ಅಶೋಕ ಹೇಳಿಕೆ ಕುರಿತಂತೆ ಮಾತನಾಡಿ, ಅವರ ಉದ್ದೇಶ ಏನು ಇರುತ್ತದೋ ಅದನ್ನೇ ಮಾತನಾಡುತ್ತಾರೆ. ಸರ್ವಜನಾಂಗದ ಶಾಂತಿಯ ತೋಟ ಎನ್ನುವುದು ನಮ್ಮ ಮಂತ್ರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮ ಕೆಲಸ. ಅವರು ತಮ್ಮದೇಯಾದ ಅರ್ಥದಲ್ಲಿ ಹೇಳಿರಬೇಕು ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸವದಿ, ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಮೈ ಬ್ರದರ್ಸ್ ಎಂದು ಹೇಳಿರಲಿಲ್ಲ, ಬಿಜೆಪಿಯವರು ಅದನ್ನು ತಿರುಚಿ ಈ ರೀತಿ ಹೇಳಿದ್ದಾರೆ. ಡಿಕೆಶಿ ಮಾತನಾಡಿರುವುದನ್ನು ನಾನು ನೋಡಿದ್ದೇನೆ. ಆ ಅರ್ಥದಲ್ಲಿ ಅವರು ಮಾತನಾಡಿಲ್ಲ, ದೇಶದ ದುಷ್ಕೃತ್ಯದಲ್ಲಿ ಬಿಜೆಪಿಯವರು ಸುಖಾ-ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ ಎಂದು ಚಾಟಿ ಬೀಸಿದರು.
ಇದನ್ನೂ ಓದಿ:ದೇಶ ವಿರೋಧಿ ಘೋಷಣೆ ಕೂಗಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ: ಸಚಿವ ಮಧು ಬಂಗಾರಪ್ಪ