ಕರ್ನಾಟಕ

karnataka

ETV Bharat / state

ಸಿಎಂ ಬದಲಾವಣೆ ವಿಚಾರ ಬರೀ ಊಹಾಪೋಹ: ಸಿದ್ದರಾಮಯ್ಯ - Siddaramaiah Clarifies - SIDDARAMAIAH CLARIFIES

ರಾಜ್ಯ ಕಾಂಗ್ರೆಸ್​ ನಾಯಕರು ವರಿಷ್ಠರೊಂದಿಗೆ ಚರ್ಚೆ ಮಾಡುವುದು ಸಹಜ. ಸಿಎಂ ಬದಲಾವಣೆ ವಿಚಾರ ಊಹಾಪೋಹ. ಈ ರೀತಿಯ ಊಹಾಪೋಹ ಹಿಂದೆಯೂ ನಡೆದಿವೆ. ಈಗಲೂ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

SIDDARAMAIAH CLARIFIES
ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Oct 5, 2024, 4:03 PM IST

ರಾಯಚೂರು:ಪ್ರತಿಪಕ್ಷದವರು ಸುಳ್ಳು ಆರೋಪ ಮಾಡಿ ನನ್ನನ್ನು ರಾಜೀನಾಮೆ ನೀಡುವಂತೆ ಹೇಳಿದರೆ ನೀಡಲು ಸಾಧ್ಯವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾನ್ವಿಯಲ್ಲಿ ಇಂದು ನಡೆದ ಸ್ವಾಭಿಮಾನಿ ಸಮಾವೇಶಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಳ್ಳು ಆರೋಪ ಮಾಡಿದರೆ ನಾವು ಉತ್ತರ ಕೊಡುತ್ತೇವೆ. ವಸ್ತುಸ್ಥಿತಿಯನ್ನು ರಾಜ್ಯದ ಜನರ ಮಂದೆ ಇಡುವಂತಹ ಪ್ರಯತ್ನ ಮಾಡುತ್ತೇವೆ ಎಂದರು.

ಸಚಿವ ಸತೀಶ್ ಜಾರಕಿಹೊಳಿ ಅವರ ದೆಹಲಿ ಭೇಟಿ ಪ್ರಸ್ತಾಪಿಸುತ್ತಾ, ಸಿಎಂ ಬದಲಾವಣೆ ನಿಜವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಸಿಎಂ ಬದಲಾವಣೆ ವಿಚಾರ ಊಹಾಪೋಹ. ರಾಜ್ಯದ ಕಾಂಗ್ರೆಸ್​ನ ವಿವಿಧ ನಾಯಕರು ವರಿಷ್ಠರೊಂದಿಗೆ ಚರ್ಚೆ ಮಾಡುವುದು ಸಹಜ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಊಹಾಪೋಹಗಳು ಅಗತ್ಯವಿಲ್ಲ. ಸತೀಶ್ ಜಾರಕಿಹೊಳಿ ನಮ್ಮ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದರೆ ಅದಕ್ಕೆ ಬೇರೆ ಇನ್ನೇನೋ ಊಹೆ ಮಾಡುವುದು, ಬೋಸರಾಜು ಇನ್ಯಾರನ್ನೋ ಭೇಟಿ ಮಾಡಿದರೆ ಅದಕ್ಕೊಂದು ಊಹಾಪೋಹ ಮಾಡುವುದು. ಈ ರೀತಿಯ ಊಹಾಪೋಹ ಹಿಂದೆಯೂ ನಡೆದಿದೆ. ಈಗಲೂ ನಡೆಯುತ್ತಿದೆ. ಈಗ ಯಾಕೆ ಊಹಾಪೋಹ ಎದ್ದಿರೋದು? ಎಂದು ಸಿಎಂ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

ಜೆಡಿಎಸ್​ ಶಾಸಕ ಜಿಟಿ ದೇವೇಗೌಡ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಅವರು ಜೆಡಿಎಸ್ ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದಲ್ಲಿದ್ದು, ಮುಡಾದ ಸದಸ್ಯರೂ ಆಗಿದ್ದಾರೆ. ಅವರು ಸತ್ಯ ಹೇಳಿರುವುದರಲ್ಲಿ ತಪ್ಪಿಲ್ಲ. ಈ ಪ್ರಕರಣದ ವಿರುದ್ಧ, ಪ್ರತಿಪಕ್ಷದವರ ಪಾದಯಾತ್ರೆಯನ್ನು ನಡೆಸುವುದು ಬೇಡ ಎಂದವರಲ್ಲಿ ಜಿಟಿ ದೇವೇಗೌಡರು ಒಬ್ಬರು ಎಂದರು.

ತಾನು ರಾಜೀನಾಮೆ ನೀಡಲು ಸಿದ್ಧ, ಸಿಎಂ ಅವರೂ ರಾಜೀನಾಮೆ ನೀಡುತ್ತಾರಾ ಎಂಬ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮೊದಲು ರಾಜೀನಾಮೆ ನೀಡಲಿ. ರಾಜೀನಾಮೆ ಕೊಡುವುದಿದ್ದರೆ ಕೊಡಲಿ. ನಾನು ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದೇನೆಂದು ಯಾರಾದ್ರೂ ಹೇಳಿದ್ದಾರಾ? ತಪ್ಪೇ ಮಾಡಿಲ್ಲ ಎಂದ ಮೇಲೆ ಯಾರಿಗೂ ಭಯ ಪಡುವ ಅಗತ್ಯವಿಲ್ಲ. ಬಿಜೆಪಿಯವರಿಗೂ ಭಯ ಪಡಲ್ಲ. ಜೆಡಿಎಸ್​ನವರಿಗೂ ಭಯಪಡಲ್ಲ ಎಂದು ಸ್ಪಷ್ಟಪಡಿಸಿದರು.

ಮಾನ್ವಿಯಲ್ಲಿ ಸ್ವಾಭಿಮಾನಿ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದುಳಿದ ವರ್ಗದವರು, ದೀನದಲಿತರ, ಅಲ್ಪಸಂಖ್ಯಾತರ ವರ್ಗದವರ ಸ್ವಾಭಿಮಾನಿ ಸಮಾವೇಶ ಇದಾಗಿದೆ ಎಂದು ಹೇಳಿದರು.

ನಗರದ ಕೃಷಿ ವಿವಿ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪ್ರಾಧಿಕಾರ, ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕರ್ನಾಟಕ ಸಂಭ್ರಮ-50 ಗೋಕಾಕ್ ಚಳವಳಿಯ‌ ಹಿನ್ನೋಟ-ಮುನ್ನೋಟ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಭಾಗದಲ್ಲಿ ಆಂಧ್ರ-ತೆಲಂಗಾಣ ಗಡಿ ಆಗಿರುವುದರಿಂದ ಇಲ್ಲಿ ತೆಲುಗು ಭಾಷೆಯ ಪ್ರಭಾವವಿದೆ. ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಉರ್ದು ಭಾಷೆ ಪ್ರಭಾವ ಕೂಡ ಇದೆ. ಕರ್ನಾಟಕ ಏಕೀಕರಣ ಆದ ಮೇಲೆ ಬೇರೆ ಬೇರೆ ರಾಜ್ಯದಲ್ಲಿ ಸೇರಿದ್ದ ಕನ್ನಡ ಮಾತನಾಡುವ ಜನ ಕರ್ನಾಟಕಕ್ಕೆ ಸೇರಬೇಕೆಂದು ಆಗ ಹೋರಾಟ ನಡೆಯಿತು. ಏಕೀಕರಣ ಆದ ಮೇಲೆ ಬೇರೆ ರಾಜ್ಯಕ್ಕೆ ಸೇರಿದ ಪ್ರದೇಶಗಳು ಕರ್ನಾಟಕಕ್ಕೆ ಸೇರಿದವು. ಮೊದಲು ಕರ್ನಾಟಕ ಅಂತ ಹೆಸರು ಇರಲಿಲ್ಲ. ಮೈಸೂರು ರಾಜ್ಯವನ್ನ 1973 ನವೆಂಬರ್​ 1 ರಂದು ಕರ್ನಾಟಕ ಅಂತ ನಾಮಕರಣ ಮಾಡಲಾಯಿತು. ಈ ನಾಮಕರಣ ಮಾಡಿ 50 ವರ್ಷ ಅಗಿದೆ. ಇದನ್ನ ಇಡೀ ವರ್ಷ ಆಚರಣೆ ಮಾಡಬೇಕೆಂದು ನಿರ್ಧರಿಸಿದ್ದೇವೆ. ಮೈಸೂರು ಭಾಗ, ಮಂಗಳೂರು ಭಾಗದಲ್ಲೂ ಸಭೆ ಮಾಡಲಾಗಿದೆ. ರಾಯಚೂರಿನಲ್ಲೂ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕನ್ನಡ ಆಡಳಿತ ಭಾಷೆ ಆಗಬೇಕೆಂದು ಗೋಕಾಕ್ ಚಳವಳಿ ನಡೆದಿತ್ತು. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷ ನಾನು ಆಗಿದ್ದೆ. ಅಂದು ರಾಮಕೃಷ್ಣ ಹೆಗಡೆ ಸಿಎಂ ಇದ್ದರು. ಅವರು ನನ್ನನ್ನು ಕರೆದು ಸ್ವತಂತ್ರವಾಗಿ ಗೆದ್ದಿದ್ದೀರಿ ಅಂತ ಅಧ್ಯಕ್ಷರನ್ನಾಗಿ ಮಾಡಿದರು. ನಾನು ಸಾಹಿತಿ ಅಲ್ಲ, ಎಂ.ಎ ಕನ್ನಡ ಮಾಡಿಲ್ಲ, ಆದರೂ ನೀವೇ ಆಗಬೇಕೆಂದು ಆ ಸ್ಥಾನಕ್ಕೆ ತಂದು ಕೂರಿಸಿದರು. ಮಾತೃಭಾಷೆಯನ್ನ ಕಾಯುವುದಕ್ಕೆ ಕಾವಲು ಸಮಿತಿ ಯಾವ ರಾಜ್ಯದಲ್ಲೂ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಕಾಯಲಿಕ್ಕೆ, ಆಡಳಿತ ಭಾಷೆ ಮಾಡಲಿಕ್ಕೆ ಸಮಿತಿಯಿದೆ. ಅದೇ ಈಗ ಕನ್ನಡ ಪ್ರಾಧಿಕಾರ ಆಗಿದೆ. ಕಡತಗಳ ಮೇಲೆ ಕನ್ನಡದಲ್ಲಿ ಸಹಿ ಮಾಡಲು ನಾನು ಆವತ್ತು ಪ್ರಾರಂಭಿಸಿದ್ದು ಈಗಲೂ ಕನ್ನಡದಲ್ಲಿ ಸಹಿ ಮಾಡುತ್ತೇನೆ. ಟಿಪ್ಪಣಿಗಳನ್ನ ಕನ್ನಡದಲ್ಲಿ ಬರೆಯುತ್ತೇನೆ. ಇಂಗ್ಲಿಷ್ ಕಲಿಯಲು ಬೇಡ ಅನ್ನೋದಿಲ್ಲ. ಕನ್ನಡ ಅಬಾಧಿತ ಅಗ್ರ ಭಾಷೆಯಾಗಬೇಕು ಎಂದು ತಿಳಿಸಿದರು.

ಗೋಕಾಕ್ ಚಳವಳಿಗೆ ವೇಗ ಸಿಕ್ಕಿದ್ದು ವರನಟ ಡಾ. ರಾಜ್​​ಕುಮಾರ ಹೋರಾಟಕ್ಕೆ ಇಳಿದ ಮೇಲೆ. ಇದೊಂದು ಐತಿಹಾಸಿಕ ಚಳವಳಿಯಾಗಿದೆ. ಇದನ್ನ ಗೋಕಾಕ್ ಚಳವಳಿ ಅನ್ನೋದಕ್ಕಿಂತ. ಕನ್ನಡ ಚಳವಳಿ ಭಾಷಾ ಚಳವಳಿ ಅನ್ನೋದು ಸೂಕ್ತ. ಯಾವ ಭಾಷೆ ಮಾತಾಡ್ತಾರೆ ಮಾತಾಡಲಿ, ಯಾವ ಭಾಷೆಗೂ ವಿರೋಧ ಇಲ್ಲ. ಆದರೆ, ಕನ್ನಡ ಆಡಳಿತ ಭಾಷೆಯಾಗಬೇಕು ಎಂದು ಹಲವು ಹಳೆಯ ವಿಚಾರಗಳನ್ನು ಸಿಎಂ ಪ್ರಸ್ತಾಪಿಸಿದರು.

ಇದನ್ನೂ ಓದಿ:ನಾನು ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೇನಾ? ನಾನ್ಯಾಕೆ ಭಯಪಡಲಿ: ಹೆಚ್.ಡಿ.ಕುಮಾರಸ್ವಾಮಿ - H D Kumaraswamy

ABOUT THE AUTHOR

...view details