ಮೈಸೂರು: "ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ" ಎಂದು ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೂಗಾಟ, ಚರ್ಚೆ ಏನು ಇಲ್ಲ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅನಾವಶ್ಯಕವಾಗಿ ಸಿಎಂ ಕುರ್ಚಿ ಬಗ್ಗೆ ಚರ್ಚೆ ಆಗುತ್ತಿದೆ ಅಷ್ಟೇ" ಎಂದರು.
ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವ ವಿಚಾರ ಕುರಿತು ಮಾತನಾಡಿದ ಅವರು, "ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದರ ಬಗ್ಗೆ ಚರ್ಚೆ ಮಾಡುವುದಕ್ಕೆ ಸಭೆ ಕರೆಯಲಾಗಿದೆ. ಸುರ್ಜೇವಾಲಾ ಕೂಡ ಸಭೆಗೆ ಬರುತ್ತಿದ್ದಾರೆ. ಇದು ಯಾವುದೇ ಶಕ್ತಿ ಪ್ರದರ್ಶನ ಅಲ್ಲ" ಎಂದು ಸ್ಪಷ್ಟಪಡಿಸಿದರು.
"ಡಿ.ಕೆ.ಶಿವಕುಮಾರ್ಗೆ ಹೈಕಮಾಂಡ್ ಬೆಂಬಲ ಇದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಇಡೀ ಕಾಂಗ್ರೆಸ್ಗೆ ಹೈಕಮಾಂಡ್ ಬೆಂಬಲವಾಗಿ ನಿಂತಿದೆ. ಹೈಕಮಾಂಡ್ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿದೆ. ಡಿ.ಕೆ.ಶಿವಕುಮಾರ್ ಹೇಳಿರುವುದು ಸರಿ ಇದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದೇ ಅಂತಿಮ. ಒಂದು ಕಡೆ ಸೇರಿ ಊಟ ಮಾಡುವುದು ಅಪರಾಧವಾ?, ಟೀ ಕುಡಿಯಲು ಸೇರಿವುದು ಗುಂಪುಗಾರಿಕೆಯಾ?, ಆ ರೀತಿ ಏನೂ ಇಲ್ಲ. ಕಾಂಗ್ರೆಸ್ನಲ್ಲಿ ಎಲ್ಲರೂ ಒಗಟ್ಟಾಗಿದ್ದೇವೆ" ಎಂದು ಹೇಳಿದರು.
ಪರಮೇಶ್ವರ್ ಅವರ ಡಿನ್ನರ್ ಪಾರ್ಟಿಗೆ ಬ್ರೇಕ್ ಹಾಕಿರುವ ವಿಚಾರದ ಬಗ್ಗೆ ಮಾತನಾಡಿ, "ಡಿನ್ನರ್ ಪಾರ್ಟಿಗೆ ತಡೆಯಾಗಿಲ್ಲ. ಸುರ್ಜೇವಾಲ ನಾಳೆ ಬರ್ತಿದ್ದಾರೆ. ಚರ್ಚೆ ಮಾಡಿ ಕಾರ್ಯಕ್ರಮ ಮಾಡುತ್ತೇವೆ. ಡಿನ್ನರ್ಗೆ ಯಾವ ತಡೆಯನ್ನೂ ಕೊಟ್ಟಿಲ್ಲ. ನಿಲ್ಲಿಸಿ ಎಂದು ಯಾರು ಹೇಳಿಲ್ಲ. ಡಿ. ಕೆ. ಶಿವಕುಮಾರ್ ಇದ್ದಾಗಲೂ ಡಿನ್ನರ್ ಪಾರ್ಟಿ ನಡೆದಿದೆ, ಇಲ್ಲದಿದ್ದಾಗಲೂ ನಡೆದಿದೆ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದರು.