ನೇಹಾ ಹಿರೇಮಠ ಮನೆಗೆ ಸಿಐಡಿ ಅಧಿಕಾರಿಗಳ ಭೇಟಿ ಹುಬ್ಬಳ್ಳಿ (ಧಾರವಾಡ): ಕೊಲೆಯಾದ ನೇಹಾ ಹಿರೇಮಠ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ಕೊಟ್ಟು ಮಾಹಿತಿ ಪಡೆಯುತ್ತಿದ್ದಾರೆ.
ಸಿಐಡಿ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ನೇಹಾ ಹಿರೇಮಠ ಮನೆಗೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ಬಿಡ್ನಾಳದಲ್ಲಿರುವ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು, ತಂದೆ ನಿರಂಜನ ಹಿರೇಮಠ, ತಾಯಿ ಗೀತಾ ಹಿರೇಮಠ ಅವರ ವಿಚಾರಣೆ ಮಾಡುವುದರ ಜೊತೆಗೆ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ನಲ್ಲಿ ಏಪ್ರಿಲ್ 18ರ ಸಂಜೆ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ನಡೆದಿತ್ತು. ಪ್ರಕರಣದ ಆರೋಪಿ ಫಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಈ ಕೊಲೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮುಂದುವರಿದಿದೆ. ಸೋಮವಾರ (ಏ.22)ದಂದು ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ:'ಸಾವಿನ ಮನೆಯಲ್ಲಿ ರಾಜಕೀಯ ಬೇಡ, ನೇಹಾಗೆ ನ್ಯಾಯ ಕೊಡಿಸುವುದು ಸರ್ಕಾರದ ಜವಾಬ್ದಾರಿ': ಸುರ್ಜೇವಾಲಾ - Neha Murder Case
ಆರೋಪಿ ಫಯಾಜ್ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ನಿನ್ನೆ ಕೊಲೆ ನಡೆದ ಕಾಲೇಜು ಆವರಣಕ್ಕೆ ಆರೋಪಿಯನ್ನು ಕರೆತಂದು ಮಹಜರು ಮಾಡಿದರು. ಧಾರವಾಡ ಕೇಂದ್ರ ಕಾರಾಗೃಹದಿಂದ ಆರೋಪಿಯನ್ನು ಬುಧವಾರ ಸಿಐಡಿ ವಶಕ್ಕೆ ಪಡೆದಿದೆ. ಸಂಪೂರ್ಣ ಮಾಹಿತಿ ಸಂಗ್ರಹಕ್ಕೆ ಆರೋಪಿ ಫಯಾಜ್ನನ್ನು ತಮ್ಮ ವಶಕ್ಕೆ ನೀಡುವಂತೆ ಸಿಐಡಿ ತಂಡ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆ 6 ದಿನಗಳ ಕಾಲ ಆರೋಪಿಯನ್ನು ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಎಸ್ಪಿ ವೆಂಕಟೇಶ್ ನೇತೃತ್ವದ ತಂಡ ಮಂಗಳವಾರದಿಂದ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದೆ.
ಇದನ್ನೂ ಓದಿ:ನೇಹಾ ಕೊಲೆ ಪ್ರಕರಣ: ಆರೋಪಿ ಫಯಾಜ್ ವಶಕ್ಕೆ ಪಡೆದ ಸಿಐಡಿ, ಘಟನಾ ಸ್ಥಳದ ಮಹಜರು - NEHA MURDER CASE