ಚಿತ್ರದುರ್ಗ:ದೇಶ, ಭಾಷೆ, ಧರ್ಮದ ಗಡಿ ಮೀರಿ ಯುವ ಜೋಡಿಯೊಂದು ಕೋಟೆನಾಡು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ವಿವಾಹವಾದರು.
ನಿನ್ನೆ(ಸೋಮವಾರ) ಚಿತ್ರದುರ್ಗ ನಗರದ ಜಿ.ಜಿ ಸಮುದಾಯ ಭವನದಲ್ಲಿ ಅಮೆರಿಕದ ಕೆಲ್ಲಿ ಎಂಬ ಯುವತಿಯೊಂದಿಗೆ ಚಿತ್ರದುರ್ಗದ ಅಭಿಲಾಷ್ ಅಪ್ಪಟ ಭಾರತೀಯ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮದುಮಗಳು ಕೆಲ್ಲಿ ರೇಷ್ಮೆ ಸೀರೆ ಧರಿಸಿ, ಕೈಗೆ ಮೆಹಂದಿ, ಹಣೆಗೆ ಸಿಂಧೂರ, ಬಾಸಿಂಗ ತೊಟ್ಟು ಸಿಂಗಾರಗೊಂಡಿದ್ದರು. ಅಭಿಲಾಷ್ ಬಿಳಿ ಪಂಚೆ, ಅಂಗಿ, ಪೇಟ, ಹೆಗಲ ಮೇಲೊಂದು ಟವಲು ಹಾಕಿಕೊಂಡು ದೇಸಿ ಸ್ಟೈಲ್ನಲ್ಲಿ ಮಿಂಚಿದರು.
ಚಿತ್ರದುರ್ಗ ನಗರದ ಅಭಿಲಾಷ್ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ತೆರಳಿದ್ದರು. ಕೋವಿಡ್ ಸಾಂಕ್ರಾಮಿಕವಿದ್ದ ಸಂದರ್ಭದಲ್ಲಿ ಕೆಲ್ಲಿ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಕೋವಿಡ್ ಬಳಿಕ ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿದ್ದು, ಪೋಷಕರನ್ನು ಒಪ್ಪಿಸಿದ್ದರು. ಇದೀಗ ಕೆಲ್ಲಿ ಪೋಷಕರು ಸಂಪ್ರದಾಯಬದ್ಧವಾಗಿ ಮಗಳನ್ನು ಅಳಿಯನಿಗೆ ಧಾರೆಯೆರೆದು ಕೊಟ್ಟಿದ್ದಾರೆ.
ಮದುಮಗ ಅಭಿಲಾಷ್ ಪ್ರತಿಕ್ರಿಯಿಸಿ, "ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾಗ ಕೆಲ್ಲಿ ಜೊತೆ ಪ್ರೇಮಾಂಕುರವಾಯಿತು. ವಿದೇಶಿ ಯುವತಿಯನ್ನು ಮದುವೆಯಾಗಿದ್ದು ಸಂತಸ ಉಂಟುಮಾಡಿದೆ. ಎರಡೂ ಕಡೆ ಸಾಂಸ್ಕೃತಿಕ ಭಿನ್ನತೆ ಇದೆ. ಅವರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಉತ್ಸಾಹವಿದೆ. ಕೆಲ್ಲಿಗೂ ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಇದೆ. ಅವರು ಬರಹಗಾರ್ತಿ. ಇಲ್ಲಿನ ಜನಜೀವನದ ಬಗ್ಗೆ ಆಕೆಗೆ ಒಲವಿದೆ. ನಮ್ಮೊಂದಿಗೆ ಬೆರೆತು ಭಾರತೀಯಳೇ ಆಗಿದ್ದಾಳೆ" ಎಂದು ತಿಳಿಸಿದರು.
ಕನ್ನಡದಲ್ಲೇ ಮಾತು ಆರಂಭಿಸಿದ ಕೆಲ್ಲಿ, "ನಾನು ಈ ಭಾಷೆ ಕಲಿತು ಕನ್ನಡತಿ ಆಗಿದ್ದೇನೆ. ಮದುವೆ ಶಾಸ್ತ್ರಗಳು, ಸ್ವಾಗತಿಸಿದ ರೀತಿ ತುಂಬಾ ಇಷ್ಟವಾಯಿತು. ಭಾರತೀಯ ಸಂಸ್ಕೃತಿ ಚೆನ್ನಾಗಿದೆ. ಭಾರತೀಯನನ್ನು ಮದುವೆಯಾಗಿದ್ದಕ್ಕೆ ಕುಟುಂಬಸ್ಥರಲ್ಲೂ ಸಂತೋಷವಿದೆ. ಅವರೆಲ್ಲ ಅಭಿಲಾಷ್‌ನನ್ನು ಪ್ರೀತಿಸುತ್ತಾರೆ" ಎಂದರು.
ಅಭಿಲಾಷ್ ಬಿಎನ್‌ವೈ ಬ್ಯಾಂಕ್‌ನಲ್ಲಿ ಕ್ವಾಂಟಿಟಿ ರಿಸರ್ಚರ್ ಆಗಿ ಕೆಲಸ ಮಾಡುತ್ತಿದ್ದು, ಕೆಲ್ಲಿ ಹೆಲ್ತ್ಕೇರ್ ಕಂಪನಿಯಲ್ಲಿ ಇನ್‌ಸ್ಪಕ್ಷನಲ್ ಡಿಸೈನರ್ ಆಗಿದ್ದಾರೆ.
ಇದನ್ನೂ ಓದಿ:ಶಾಲೆ ಪ್ರಾರಂಭಿಸುತ್ತಿರುವ ಅಶ್ವಿನಿ: 20 ವರ್ಷಗಳ ಬಳಿಕ ನನಸಾಯ್ತು ಅಪ್ಪು ಕನಸು