ಕರ್ನಾಟಕ

karnataka

ETV Bharat / state

ದಾವಣಗೆರೆ : ಮಗುವಿನ ತಲೆಯ ಮೇಲೆ ಬಿದ್ದ ಮನೆ ಗೋಡೆ ಇಟ್ಟಿಗೆ ; ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಜೈಭೀಮ್ ನಗರದಲ್ಲಿ ಮಳೆಗೆ ಮನೆಗೋಡೆ ಕುಸಿದು ನಾಲ್ಕು ವರ್ಷದ ಮಗುವಿಗೆ ಗಂಭೀರ ಗಾಯವಾಗಿದೆ.

davanagere
ದಾವಣಗೆರೆ (ETV Bharat)

By ETV Bharat Karnataka Team

Published : Oct 17, 2024, 6:08 PM IST

Updated : Oct 17, 2024, 7:05 PM IST

ದಾವಣಗೆರೆ : ಹಾವೇರಿಯಲ್ಲಿ ಬಾಲಕ ನೀರಿನಲ್ಲಿ ಕೊಚ್ಚಿಹೋದ ಪ್ರಕರಣ ಜೀವಂತ ಇರುವಾಗಲೇ ಹರಿಹರದಲ್ಲಿ ಮತ್ತೊಂದು ದುರಂತ ಜರುಗಿದೆ.‌ ನಿರಂತರ ಮಳೆಯಿಂದಾಗಿ ಇಂದು ಬೆಳಗ್ಗೆ 11 ಗಂಟೆಯ ಸಮಯದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದು, ನಾಲ್ಕು ವರ್ಷದ ಮಗುವಿಗೆ ಗಂಭೀರ ಗಾಯವಾಗಿ, ಮಗು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದೆ. ಅದೃಷ್ಟವಶಾತ್​ ಪ್ರಾಣಾಪಾಯದಿಂದ ಇಡೀ ಕುಟುಂಬ ಪಾರಾಗಿದೆ.

ಜಿಲ್ಲೆಯ ಹರಿಹರ ಪಟ್ಟಣದ ಜೈಭೀಮ್ ನಗರದಲ್ಲಿ ಘಟನೆ ಜರುಗಿದೆ. ಆಯೀಷಾ ಉಮ್ರಾ (04) ತೀವ್ರವಾಗಿ ಗಾಯಗೊಂಡಿರುವ ಬಾಲಕಿ. ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ನೆನೆದು ತೇವಗೊಂಡ ಮನೆಯ ಗೋಡೆಯ ಸಿಮೆಂಟ್​ ಇಟ್ಟಿಗೆ ಬಾಲಕಿಯ ತಲೆ ಮೇಲೆ ಬಿದ್ದಿದೆ. ಹೀಗಾಗಿ ಆಕೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.‌

ಮಗುವಿನ ಸಂಬಂಧಿ ಮೈಮೂನ್ ಬೀ ಮಾತನಾಡಿದ್ದಾರೆ (ETV Bharat)

ಗೋಡೆ ಬಿದ್ದ ಶಬ್ಧ ಕೇಳಿ ಸಂಬಂಧಿಕರು ದೌಡಾಯಿಸಿ, ಮೂರ್ಚೆ ಹೋಗಿದ್ದ ಬಾಲಕಿ ಆಯೀಷಾ ಉಮ್ರಾಳನ್ನು
ತಕ್ಷಣ ಹರಿಹರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ದಾವಣಗೆರೆ ಜಿಲ್ಲಾಸ್ಪತ್ರೆ, ಬಾಪೂಜಿ ಆಸ್ಪತ್ರೆ, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬಾಲಕಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆಗೆ ಬಲವಾಗಿ ಗಾಯ ಆಗಿರುವ ಪರಿಣಾಮ, ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆಗಿದೆ. ಮಗು ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.

ಅದೃಷ್ಟವಶಾತ್ ದುರಂತದಿಂದ ಪಾರಾದ ಇಡೀ ಕುಟುಂಬ: ಹರಿಹರದ ಜೈ ಭೀಮ್ ನಗರದಲ್ಲಿ ನಡೆದ ಗೋಡೆ ಕುಸಿದ ದುರಂತದಲ್ಲಿ ಇಡೀ ಕುಟುಂಬ ಅದೃಷ್ಟವಶಾತ್ ಪಾರಾಗಿದೆ. ರಾತ್ರಿ ವೇಳೆ ಗೋಡೆ ಕುಸಿದಿದ್ದರೆ ಇಡೀ ಕುಟುಂಬ ದುರಂತಕ್ಕೆ ಸಿಲುಕುವ ಸಾಧ್ಯತೆ ಇತ್ತು.

ಮಗು ಗೋಡೆ ಪಕ್ಕದಲ್ಲಿ ಒಂದೇ ಮಲಗಿದ್ದ ವೇಳೆ ದುರ್ಘಟನೆ ನಡೆದಿದೆ. ತಾಯಿ ಗುಲಾಬ್ ಜಾನ್ ನಾಲ್ಕು ಜನ ಮಕ್ಕಳೊಂದಿಗೆ ಬೀಡಿ ಕಟ್ಟುತ್ತಾ ಹರಿಹರ ಭೀಮ್ ನಗರದಲ್ಲಿ ವಾಸವಾಗಿದ್ದಾರೆ. ಪತಿಯಿಂದ ದೂರ ಉಳಿದು ಬೀಡಿ ಕಟ್ಟುತ್ತಾ ಕುಟುಂಬ ನಿರ್ವಹಣೆ ಮಾಡ್ತಿದ್ದಾರೆ. ಮಗು ಆಯೀಷಾ ಉಮ್ರಾ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವುದರಿಂದ ಇಡೀ ಕುಟುಂಬ ಆತಂಕದಲ್ಲಿದೆ.

ಈ ಬಗ್ಗೆ ಮಗುವನ್ನ ಆಸ್ಪತ್ರೆಗೆ ಸೇರಿಸಿದ ಮೊಹ್ಮದ್​ ಇಕ್ಬಾಲ್ ಅವರು ಮಾತನಾಡಿ, 'ಗೋಡೆ ಬಿದ್ದು ಮಗುವಿಗೆ ಕಿವಿಯಲ್ಲಿ, ಮೂಗಿನಲ್ಲಿ, ಬಾಯಿಯಲ್ಲಿ ರಕ್ತ ಬರುತ್ತಿದ್ದರಿಂದ ಹರಿಹರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ವಿ. ಅಲ್ಲಿ ಏನು ಹೇಳಲಿಲ್ಲ. ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದ್ರು. ಇಲ್ಲಿಗೆ ಬಂದಾಗ ಬಾಪೂಜಿ ಆಸ್ಪತ್ರೆಗೆ ಬರೆದುಕೊಟ್ಟರು. ಅಲ್ಲಿ ಎಸ್​ಎಸ್ ಆಸ್ಪತ್ರೆಗೆ ಹೋಗುವಂತೆ ಹೇಳಿದ್ರು. ಇವರು ಏನೂ ಗ್ಯಾರಂಟಿ ಹೇಳುತ್ತಿಲ್ಲ. ಜನಪ್ರತಿನಿಧಿಗಳು ಇಲ್ಲಿಗೆ ಬಂದು ವೋಟು ತೆಗೆದುಕೊಂಡು ಹೋಗುತ್ತಾರೆ. ಅವರೇನಾದ್ರು ಇಲ್ಲಿಗೆ ಮುಂಚಿತವಾಗಿ ಬಂದಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿರಲಿಲ್ಲ. ಮಳೆ ಬಂದ್ರೆ ಏರಿಯಾದ ನೀರು ಮನೆಯೊಳಗೆ ನುಗ್ಗುತ್ತೆ. ಸಂಬಂಧಪಟ್ಟವರು ಇತ್ತ ಬಂದು ಸಮಸ್ಯೆ ಬಗೆಹರಿಸಿ' ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಂಬಂಧಿಕರಾದ ಮೈಮೂನ್​ ಬೀ ಅವರು ಮಾತನಾಡಿ, 'ಗೋಡೆ ಬಿದ್ದಾಗ ಏನು ಶಬ್ಧ ಆಯಿತು ಎಂದು ಅಲ್ಲಿಗೆ ಹೋಗಿ ನೋಡಿದ್ವಿ. ಮಗುವಿಗೆ ಎಚ್ಚರ ಇರಲಿಲ್ಲ, ರಕ್ತ ಬರುತ್ತಿತ್ತು. ನಂತರ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋದ್ವಿ. ಅಲ್ಲಿಂದ ಬಾಪೂಜಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ರು. ಅಲ್ಲಿ ಎಸ್​ಎಸ್ ಆಸ್ಪತ್ರೆಗೆ ಹೋಗುವಂತೆ ಹೇಳಿದ್ರು. ಅಲ್ಲಿ ಹೋದ್ರೆ ಮಗು ಉಳಿಯುವ ಭರವಸೆ ಇಲ್ಲ ಎನ್ನುತ್ತಿದ್ದಾರೆ' ಎಂದರು.

ಇದನ್ನೂ ಓದಿ :ಮೈಸೂರು : ಮಳೆಗೆ ಮನೆ ಗೋಡೆ ಕುಸಿತ, ಕೂದಲೆಳೆ ಅಂತರದಲ್ಲಿ ಉಳಿಯಿತು 7 ಜನರ ಜೀವ

Last Updated : Oct 17, 2024, 7:05 PM IST

ABOUT THE AUTHOR

...view details