ಕರ್ನಾಟಕ

karnataka

ETV Bharat / state

ಮಳೆಗಾಲದಲ್ಲಿ ಯಕ್ಷಗಾನಕ್ಕೆ ವಿರಾಮ: ಕಲಾವಿದರಿಂದ ಮನೆ ಮನೆಗಳಲ್ಲಿ ಚಿಕ್ಕಮೇಳ ಪ್ರರ್ದಶನ - chikkamela special story

ಮಳೆಗಾಲದಲ್ಲಿ ಯಕ್ಷಗಾನದ ಸಾರ್ವಜನಿಕ ಪ್ರದರ್ಶನ ನಡೆಯುವುದಿಲ್ಲ. ಈ ಹಿನ್ನೆಲೆ ಯಕ್ಷಗಾನ ಕಲಾವಿದರು ತಮ್ಮ ಜೀವನ ನಿರ್ವಹಣೆಗೆ ಚಿಕ್ಕ ತಂಡಗಳನ್ನು ಮಾಡಿಕೊಂಡು ಈ ಸಮಯದಲ್ಲಿ ಮನೆ ಮನೆಗೆ ಹೋಗಿ ಯಕ್ಷಗಾನದ ಸಣ್ಣ ಪ್ರಸಂಗ ನಡೆಸಿಕೊಡುತ್ತಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

By ETV Bharat Karnataka Team

Published : Sep 2, 2024, 6:59 PM IST

Updated : Sep 2, 2024, 7:15 PM IST

ಕಲಾವಿದರಿಂದ  ಚಿಕ್ಕಮೇಳ ಪ್ರರ್ದಶನ
ಕಲಾವಿದರಿಂದ ಚಿಕ್ಕಮೇಳ ಪ್ರರ್ದಶನ (ETV Bharat)

ಚಿಕ್ಕಮೇಳ ಪ್ರರ್ದಶನ (ETV Bharat)

ಮಂಗಳೂರು: ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಮಳೆಗಾಲದಲ್ಲಿ ವಿರಾಮ ಸಿಗುವುದು ಸಾಮಾನ್ಯ‌. ಯಕ್ಷಗಾನ ಎಂಟು ತಿಂಗಳು ಸಾರ್ವಜನಿಕವಾಗಿ ಪ್ರದರ್ಶನ ಆಗುತ್ತದೆ. ಆದರೆ, ಮಳೆಗಾಲದಲ್ಲಿ ಯಕ್ಷಗಾನದ ಸಾರ್ವಜನಿಕ ಪ್ರದರ್ಶನ ನಡೆಯುವುದಿಲ್ಲ. ಈ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಯಕ್ಷಗಾನ ಕಲಾವಿದರ ಮೂಲಕ ಚಿಕ್ಕ ಮೇಳ ಯಕ್ಷಗಾನದ ಪ್ರದರ್ಶನ ನಡೆಯುತ್ತದೆ.

ಕರಾವಳಿಯಲ್ಲಿ ಯಕ್ಷಗಾನ ಕಲೆಗೊಂದು ವಿಶೇಷ ಮಾನ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನ ಸಾಮಾನ್ಯವಾಗಿ ಮಳೆಗಾಲ ಹೊರತು ಪಡಿಸಿ ಉಳಿದ ಎಂಟು ತಿಂಗಳು ನಡೆಯುತ್ತಲೇ ಇರುತ್ತದೆ. ಸಾರ್ವಜನಿಕ ಪ್ರದರ್ಶನವಾಗಿರುವ ಯಕ್ಷಗಾನ ನೋಡಲು ಸಾವಿರಾರು ಮಂದಿ ಆಸಕ್ತಿಯಿಂದ ಭಾಗವಹಿಸುತ್ತಾರೆ. ಆದರೆ, ಈ ಯಕ್ಷಗಾನ ಪ್ರದರ್ಶನ ಸೇವೆಗೆ ಮಳೆಗಾಲದಲ್ಲಿ ವಿರಾಮ ಇರುತ್ತದೆ.

ಮಳೆಗಾಲದ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನ ಕಷ್ಟ ಇರುವುದರಿಂದ ಯಕ್ಷಗಾನ ಮೇಳಗಳು ಈ ಸಂದರ್ಭದಲ್ಲಿ ಪ್ರದರ್ಶನ ನಡೆಸುವುದಿಲ್ಲ. ಆದರೆ ಕೆಲವೊಂದು ಕಲಾವಿದರಿಗೆ ಜೀವನ ನಡೆಸಲು ಅನಿವಾರ್ಯ ಆಗಿರುವುದರಿಂದ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಚಿಕ್ಕಮೇಳ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಕೆಲವು ಯಕ್ಷಗಾನ ಕಲಾವಿದರು ಒಟ್ಟು ಸೇರಿ ಮಳೆಗಾಲದ ಸಂದರ್ಭದಲ್ಲಿ ಚಿಕ್ಕಮೇಳದ ಮೂಲಕ ಮನೆಮನೆಗೆ ಹೋಗಿ ಯಕ್ಷಗಾನದ ಸಣ್ಣ ಪ್ರಸಂಗ ನಡೆಸಿಕೊಡುತ್ತಾರೆ. ಈ ಚಿಕ್ಕಮೇಳದಲ್ಲಿ ಇಬ್ಬರು ವೇಷಧಾರಿ ಕಲಾವಿದರು, ಭಾಗವತರು ಸೇರಿದಂತೆ ನಾಲ್ಕೈದು ಮಂದಿ ಇರುತ್ತಾರೆ. ಇವರು ಮನೆ ಮನೆಗೆ ಬಂದು ಪುಟ್ಟ ಯಕ್ಷಗಾನ ಸೇವೆ ನೀಡುತ್ತಾರೆ.

ಹೀಗೆ ಮನೆ ಮನೆಗೆ ಬಂದು ಚಿಕ್ಕ ಮೇಳ ಯಕ್ಷಗಾನ ಮಾಡುವ ತಂಡ ಒಂದೆರಡು ದಿನ ಮುಂಚಿತವಾಗಿ ಆಯಾ ಊರಿಗೆ ಬಂದು ಮನೆಯವರಿಗೆ ಮಾಹಿತಿ ನೀಡುತ್ತಾರೆ. ಮನೆಗೆ ಯಕ್ಷಗಾನ ಪ್ರದರ್ಶನಕ್ಕೆ ಬರುವ ಸಂದರ್ಭದಲ್ಲಿ ಆಯಾ ಮನೆಯವರು ಒಂದು ಕೆ.ಜಿ ಅಕ್ಕಿ, ಹೂ, ವೀಳ್ಯದೆಲೆ, ಅಡಕೆ ಜೊತೆಗೆ ದಕ್ಷಿಣೆ ನೀಡಬೇಕಾಗುತ್ತದೆ. ಮನೆ ಮನೆಗೆ ಹೋಗಿ ಪ್ರದರ್ಶನ ನೀಡುವ ತಂಡ ಸಂಜೆ 7 ರಿಂದ ರಾತ್ರಿ 11 ಗಂಟೆಯ ಮಧ್ಯೆ ಪ್ರದರ್ಶನ ನೀಡುತ್ತಾರೆ. ಸುಮಾರು 30 ರಿಂದ 35 ಮನೆಗಳಿಗೆ ತೆರಳಿ ಯಕ್ಷಗಾನ ಪ್ರದರ್ಶನ ಮಾಡುತ್ತಾರೆ.

ಕಲಾವಿದರು ಚಿಕ್ಕಮೇಳದ ಮೂಲಕ ಮನೆಮನೆಗೆ ತೆರಳಿ ಗೆಜ್ಜೆಸೇವೆ ಮಾಡಿ ಮಳೆಗಾಲದಲ್ಲಿ ಯಕ್ಷಗಾನವನ್ನು ಹಸಿರಾಗಿರಿಸುವುದರೊಂದಿಗೆ ತಮ್ಮ ಬದುಕಿನ ನಿರ್ವಹಣೆಯನ್ನು ಮಾಡುತ್ತಾರೆ‌. ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಸಣ್ಣತಂಡ ಇರುವ ಚಿಕ್ಕಮೇಳ ಮನೆಮನೆಗಳ ನಡುಮನೆಯಲ್ಲೋ, ಚಾವಡಿಯಲ್ಲೋ ಯಕ್ಷಗಾನ ಸೇವೆ ಮಾಡುತ್ತದೆ. ತಂಡ ಪುರಾಣ ಪ್ರಸಂಗಗಳ ಒಂದೊಂದು ಸನ್ನಿವೇಶವನ್ನು ಪ್ರದರ್ಶಿಸುತ್ತದೆ.

ತಂಡದಲ್ಲಿ ಭಾಗವತರು, ಚಂಡೆ - ಮದ್ದಳೆ ವಾದಕರು, ಒಂದು ಜೊತೆ ಸ್ತ್ರೀ - ಪುರುಷ ಪಾತ್ರಗಳು ಜೊತೆಗೆ ಪ್ರಚಾರಕರೊಬ್ಬರು ಇರುತ್ತಾರೆ. ಮನೆಯೊಂದರಲ್ಲಿ ಚಿಕ್ಕಮೇಳದ ತಂಡ 10 ರಿಂದ 15 ನಿಮಿಷಗಳ ಕಾಲ ಪ್ರದರ್ಶನ ನೀಡುತ್ತದೆ. ರಾತ್ರಿಹೊತ್ತು ಕಲಾವಿದರು ಊರಿನ ದೇವಸ್ಥಾನದಲ್ಲಿ ತಂಗುತ್ತಾರೆ.

ಗಣಪತಿ ಸ್ವಸ್ತಿಕದ ಮುಂದೆ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ಇಲ್ಲಿ ಮನೆಯ ಚಾವಡಿ ಅಥವಾ ನಡುಮನೆಯೇ ರಂಗಸ್ಥಳ. ಮನೆಮಂದಿಯೇ ಪ್ರೇಕ್ಷಕರು. ತಮ್ಮಿಂದಲೂ ದೇವರಿಗೊಂದು ಬೆಳಕಿನ ಸೇವೆ ಸಮರ್ಪಣೆ ಆಯಿತೆಂದು ಮನೆಮಂದಿ ಕಲಾವಿದರು ಪ್ರದರ್ಶಿಸಿದ ಯಕ್ಷಗಾನವನ್ನು ಧನ್ಯತೆಯಿಂದ ವೀಕ್ಷಿಸುತ್ತಾರೆ. ಯಕ್ಷಗಾನ ಮುಗಿದ ಬಳಿಕ ಮನೆ ಯಜಮಾನ ನೀಡಿದ ವೀಳ್ಯ(ಕಾಣಿಕೆ)ವನ್ನು ಪಡೆದ ಕಲಾವಿದರು ಮುಂದಿನ ಮನೆಗೆ ಪ್ರದರ್ಶನಕ್ಕೆ ತೆರಳುತ್ತಾರೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಮನೆಮನೆಯಲ್ಲೂ ನಡೆಯುವ ಈ ಸಣ್ಣಮಟ್ಟಿನ ಯಕ್ಷಗಾನ ಸೇವೆ ಆರಾಧನೆ ಹಾಗೂ ಮನರಂಜನೆಯ ದೃಷ್ಟಿಯಿಂದ ಕರಾವಳಿಗರಿಗೆ ಶ್ರೇಷ್ಠವೆನಿಸಿದರೆ, ಕಲಾವಿದರಿಗೆ ಜೀವನ ನಿರ್ವಹಣೆಗೊಂದು ಮಾರ್ಗವಾಗಿದೆ.

ಚಿಕ್ಕಮೇಳ ಪ್ರದರ್ಶನದಿಂದ ಮನೆಯ ದರಿದ್ರಗಳು ನಾಶವಾಗುತ್ತದೆ ಎಂಬ ನಂಬಿಕೆ:ಈ ಬಗ್ಗೆ ಮಾತನಾಡಿದ ಯಕ್ಷಗಾನ‌ ಕಲಾವಿದ ನಾಗರಾಜ‌ ಪೂಜಾರಿ ಬಾರ್ಕೂರು, " ಚಿಕ್ಕ ಮೇಳ ಎನ್ನುವಂತಹದು ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದ್ದ ಸಾಂಸ್ಕೃತಿಕ ಕಾರ್ಯಕ್ರಮ. ಚಿಕ್ಕ ಮೇಳದಲ್ಲಿ ಸಣ್ಣ ಕಲಾವಿದರು ಪ್ರದರ್ಶನ ನೀಡುವ ಮೂಲಕ ಯಕ್ಷಗಾನದಲ್ಲಿ ಪ್ರದರ್ಶನ ನೀಡಲು ನೈಪುಣ್ಯತೆ ಸಿಗುತ್ತದೆ. ಇದರಲ್ಲಿ ಕಲಾವಿದರಿಗೆ ಕಲಿಯಲು ಸಾಧ್ಯವಾಗುತ್ತದೆ, ಅಕ್ಷರ ಉಚ್ಚಾರಣೆ ಶುದ್ಧವಾಗುತ್ತದೆ. ಕೆಲವಷ್ಟು ಪ್ರಸಂಗಗಳ ಮಾಹಿತಿಗಳು ಸಿಗುತ್ತದೆ. ಚಿಕ್ಕಮೇಳ ಪ್ರದರ್ಶನದಿಂದ ಆ ಮನೆಯ ದರಿದ್ರಗಳು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಯಕ್ಷಗಾನದ ಕಲಾವಿದರಿಗೆ ಬೇರೆ ದುಡಿಮೆ ಇರುವುದಿಲ್ಲ. ಯಕ್ಷಗಾನದ‌ ಪ್ರದರ್ಶನ ಇಲ್ಲದ ಈ ಸಂದರ್ಭದಲ್ಲಿ ಸಣ್ಣ ಪುಟ್ಟ ಕಲಾವಿದರಿಗೆ ಇದರಿಂದ ಜೀವನ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಮಂಗಳೂರಿನಿಂದ ಅಮೆರಿಕಕ್ಕೆ ಹೋಗುವ ಗಣಪ: 94 ವರ್ಷದಿಂದ ಗಣೇಶನ ಮೂರ್ತಿ ತಯಾರಿಸುತ್ತಿರುವ ಒಂದೇ ಕುಟುಂಬ - Ganesha Murti

Last Updated : Sep 2, 2024, 7:15 PM IST

ABOUT THE AUTHOR

...view details