ಚಾಮರಾಜನಗರ:ರಾಜ್ಯದ ಗಮನ ಸೆಳೆಯುವ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆ ಗುರುವಾರ ರಾತ್ರಿ ಆರಂಭಗೊಳ್ಳಲಿದ್ದು, ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಲಿದ್ದಾರೆ. ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪೌರಾಣಿಕ, ಐತಿಹಾಸಿಕ ಕ್ಷೇತ್ರವಾದ ಚಿಕ್ಕಲ್ಲೂರಿನಲ್ಲಿ ಜ. 25 ರಿಂದ 29ರ ವರೆಗೆ ನಡೆಯುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಗುರುವಾರ ರಾತ್ರಿ ಚಂದ್ರಮಂಡಲೋತ್ಸವ ನೆರವೇರಿಸುವ ಮೂಲಕ ಚಾಲನೆ ದೊರೆಯಲಿದೆ.
ಜಿಲ್ಲೆ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಟೆಂಟ್ಗಳನ್ನು ಹಾಕಿ ಬಿಡಾರ ಹೂಡಲಿದ್ದು, ಒಂದೊಂದು ಸಮುದಾಯದವರು ಒಂದೊಂದು ಸೇವೆ ಸಲ್ಲಿಸಲಿದ್ದಾರೆ. 5 ಹಗಲು 5 ರಾತ್ರಿ ನಡೆಯುವ ಈ ಜಾತ್ರೆಯಲ್ಲಿ 4 ನೇ ದಿನ ಪಂಕ್ತಿ ಸೇವೆ ನಡೆಸಲಿದ್ದು, ಮಾಂಸದ ಅಡುಗೆ ಮಾಡಿ ಸಿದ್ದಪ್ಪಾಜಿ ದೇವರಿಗೆ ಎಡೆ ಇಟ್ಟು ಸಹಪಂಕ್ತಿ ಭೋಜನ ಮಾಡಲಿದ್ದಾರೆ.
ಪ್ರಾಣಿ ಬಲಿ ನಿಷೇಧ:ಪ್ರಾಣಿ ದಯಾ ಸಂಘದ ದಯಾನಂದ ಸ್ವಾಮೀಜಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಪ್ರಾಣಿ ಬಲಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಿಲ್ಲಾಡಳಿತ ಪಾಲಿಸಿಕೊಂಡು ಬರುತ್ತಿದೆ. ಈಗಾಗಲೇ, ಡಿಸಿ ಶಿಲ್ಪಾನಾಗ್ ಈ ಕುರಿತು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಾಣಿ, ಪಕ್ಷಿ ಬಲಿಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.