ಬೆಂಗಳೂರು:''ಹೆಚ್.ಡಿ.ದೇವೇಗೌಡರೇ, ನೂರು ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನಮಂತ್ರಿಯವರನ್ನು 6 ಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿ ಪ್ರಶ್ನೆ ಮಾಡಬಾರದು ಎಂಬ ನಿಮ್ಮ ಮಾತು ನನ್ನಲ್ಲಿ ಅತ್ಯಾಶ್ಚರ್ಯವನ್ನು ಮಾತ್ರವಲ್ಲ, ನಿಮ್ಮ ಬಗ್ಗೆ ಕನಿಕರವನ್ನೂ ಉಂಟು ಮಾಡಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ''ಒಂದು ಪ್ರಾದೇಶಿಕ ಪಕ್ಷವನ್ನು ಇಷ್ಟು ವರ್ಷಗಳ ಕಾಲ ಮುನ್ನಡೆಸುತ್ತಾ ಬಂದ ನೀವು ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಯವರನ್ನು ಟೀಕಿಸುತ್ತಾ ಬಂದವರು. ಇದೀಗ ಈ ಇಳಿವಯಸ್ಸಿನಲ್ಲಿ ಈ ಬಗೆಯ ಶರಣಾಗತಿಯ ಸ್ಥಿತಿ ಯಾಕೆ ಬಂತು?. ಮಾನ್ಯ ದೇವೇಗೌಡರೇ, ನಮ್ಮದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಇಲ್ಲಿ ಪ್ರಧಾನಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ. ಇಬ್ಬರೂ ಅವರವರ ಸ್ಥಾನಮಾನದಲ್ಲಿ ಸಮಾನರು. ಎರಡೂ ಪದವಿಗಳು ಸಮಾನವಾದುದು, ವಯಸ್ಸಿನ ಹಿರಿ-ಕಿರಿತನಗಳು ಪದವಿಗಳಿಗೆ ಅನ್ವಯವಾಗುವುದಿಲ್ಲ. ಅತಿ ಸಣ್ಣ ವಯಸ್ಸಿಗೆ ಪ್ರಧಾನಿಯಾದ ರಾಜೀವ್ ಗಾಂಧಿಯವರಿದ್ದಾಗಲೂ ಅವರಿಗಿಂತ ಹಿರಿಯರಾದ ಮುಖ್ಯಮಂತ್ರಿಗಳೂ ಇದ್ದರು. ಆಗಲೂ ಪರಸ್ಪರ ಟೀಕೆ-ಟಿಪ್ಪಣಿಗಳು ವಿನಿಮಯವಾಗುತ್ತಿದ್ದವು. ಇಲ್ಲಿಯವರೆಗೆ ಯಾರೂ ಕೂಡ ನಿಮ್ಮ ರೀತಿಯ ಉಪದ್ವಾಪ್ಯತನದ ಪ್ರಶ್ನೆಗಳನ್ನು ಎತ್ತಿರಲಿಲ್ಲ'' ಎಂದಿದ್ದಾರೆ.
''ದೇವೇಗೌಡರೇ, ನೀವು ಹಿಂದಿನ ಪ್ರಧಾನಿಗಳನ್ನು ಯಾವ ಯಾವ ರೀತಿಯಲ್ಲಿ ಪ್ರಶ್ನಿಸಿದ್ದೀರಿ, ದೂರಿದ್ದೀರಿ, ಕೆಣಕಿದ್ದೀರಿ ಎನ್ನುವ ಪಟ್ಟಿಯನ್ನು ನಾನು ನಿಮಗೆ ಕೊಡಬಲ್ಲೆ. 2002ರ ಗುಜರಾತ್ ಗಲಭೆಯ ಬಗ್ಗೆ ಲೋಕಸಭೆಯಲ್ಲಿ ನಡುರಾತ್ರಿವರೆಗೆ ನಡೆದ ಚರ್ಚೆಯಲ್ಲಿ ನೀವು ಆಗಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ವಿರುದ್ಧ ಪ್ರಯೋಗ ಮಾಡಿರುವ ಟೀಕಾಸ್ತ್ರಗಳು ಸದನದ ದಾಖಲೆಯಲ್ಲಿರಬಹುದು. ಇದನ್ನು ಈಗಲೂ ನಾನು ತಪ್ಪೆಂದು ಹೇಳುವುದಿಲ್ಲ. ಇವೆಲ್ಲವೂ ಸಂಸದೀಯ ಪ್ರಜಾಪ್ರಭುತ್ವದ ನಡವಳಿಕೆಗಳ ಭಾಗವಾಗಿರುತ್ತದೆ. ಆಗ ನೀವು ಮುಖ್ಯಮಂತ್ರಿಯೂ ಆಗಿರಲಿಲ್ಲ, ನೀವು ಕೇವಲ ಒಂದು ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದವರು. ಆಗ ಈ ನೂರು ಕೋಟಿ, 6 ಕೋಟಿ ವ್ಯತ್ಯಾಸಗಳು ಬಾಧಿಸಿರಲಿಲ್ಲವೇ?'' ಎಂದು ಸಿಎಂ ಪ್ರಶ್ನಿಸಿದ್ದಾರೆ.
''ದೇವೇಗೌಡರೇ, ಕೆಲವೇ ತಿಂಗಳುಗಳ ಹಿಂದೆ ನರೇಂದ್ರ ಮೋದಿ ಅವರಿಗಿಂತ ಕನಿಷ್ಠ ಹತ್ತು ವರ್ಷ ಸಣ್ಣವರಾಗಿರುವ ಮತ್ತು ಕೇವಲ ಒಬ್ಬ ಶಾಸಕರಾಗಿರುವ ನಿಮ್ಮ ಮಗ ಹೆಚ್.ಡಿ.ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಯಾವ ಭಾಷೆ ಬಳಸಿ ತರಾಟೆಗೆ ತೆಗೆದುಕೊಂಡಿದ್ದರೆನ್ನುವುದನ್ನು ನಾಡಿನ ಜನ ಇನ್ನೂ ಮರೆತಿಲ್ಲ, ನಿಮ್ಮ ನೆನಪಲ್ಲಿಯೂ ಇರಬಹುದು. ಆಗ ಯಾಕೆ ನೀವು ನೂರು ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಮಂತ್ರಿಯವರನ್ನು ಟೀಕಿಸಬಾರದು ಎಂದು ಮಗನಿಗೆ ಕಿವಿ ಹಿಂಡಿ ಬುದ್ದಿ ಹೇಳಿರಲಿಲ್ಲ? ಇವೆಲ್ಲವೂ ಅನುಕೂಲಶಾಸ್ತ್ರ ಅಷ್ಟೆ ಎನ್ನುವುದು ರಾಜ್ಯದ ಜನರಿಗೆ ತಿಳಿದಿದೆ'' ಎಂದಿದ್ದಾರೆ.