ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ - ಧಾರವಾಡ ಅವಳಿನಗರದಲ್ಲಿ ಇತ್ತೀಚೆಗೆ ನಡೆದ ಯುವತಿಯರ ಕೊಲೆ ಪ್ರಕರಣಗಳ ಬೆನ್ನಲ್ಲೇ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಮಹಿಳೆಯರಿಗೆ ಭದ್ರತೆಯ ಜೊತೆಗೆ, ಅವರಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಮುಂದಾಗಿದೆ.
ಕಾನೂನುಬಾಹಿರ ಚಟುವಟಿಕೆ ಹಾಗೂ ಮಹಿಳಾ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಮತ್ತೆ ಚೆನ್ನಮ್ಮ ಪಡೆ ರಚನೆಯಾಗಿದೆ. ಮಹಿಳೆಯರಿಗೆ ರಕ್ಷಣೆ ಹಾಗೂ ಧೈರ್ಯ ತುಂಬುವ ಸದುದ್ದೇಶದಿಂದ ಈ ಪಡೆಯು ಕಾರ್ಯಾಚರಣೆ ನಡೆಸಲಿದೆ. ಈಗಾಗಲೇ ಜನನಿಬಿಡ ಪ್ರದೇಶದಲ್ಲಿ ಮಹಿಳೆಯರ ಆಪ್ತ ಸಮಾಲೋಚನೆ, ಅವರ ಕುಂದುಕೊರತೆಗಳನ್ನು ಆಲಿಸಲು ಚೆನ್ನಮ್ಮ ಪಡೆಯನ್ನು ರಚಿಸಲಾಗಿದೆ. ಪುಂಡಪೋಕರಿಗಳು, ರೋಡ್ ರೋಮಿಯೋಗಳು ಹಾಗೂ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಸಮರ ಸಾರಲು ಇಂತಹದೊಂದು ಕಾರ್ಯಪಡೆ ತಯಾರಾಗಿದೆ.
ಹುಬ್ಬಳ್ಳಿ - ಧಾರವಾಡ ನಗರ ವ್ಯಾಪ್ತಿಯಲ್ಲಿ ಚೆನ್ನಮ್ಮ ಪಡೆಯನ್ನು ರಚಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕಾರ್ಯರೂಪಕ್ಕೆ ತರಲಾಗಿದೆ. ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡವು ಮಹಿಳೆಯರ ಭದ್ರತೆ ಮತ್ತು ರಕ್ಷಣೆ ಅಷ್ಟೇ ಅಲ್ಲದೆ, ಪುಂಡರು ಹಾಗೂ ಯುವತಿಯರನ್ನು ಚುಡಾಯಿಸುವವರನ್ನು ಸದೆಬಡಿಯಲಿದೆ. ನಗರದಲ್ಲಿ ಪೆಟ್ರೊಲಿಂಗ್ ಮಾಡುತ್ತ ನಿಗಾ ವಹಿಸುವುದಲ್ಲದೇ, ಸಾರ್ವಜನಿಕರು ಮತ್ತು ಶಾಲಾ ಕಾಲೇಜು ಮಕ್ಕಳಿಗೆ ಜಾಗೃತಿಯನ್ನೂ ಸಹ ಮೂಡಿಸಲಾಗುತ್ತಿದೆ.