ಕರ್ನಾಟಕ

karnataka

ETV Bharat / state

ಚೆನ್ನೈ - ಮೈಸೂರು ಹೈಸ್ಪೀಡ್​ ಬುಲೆಟ್​ ರೈಲು ಯೋಜನೆ: ರೈತರ ಜಮೀನಿನ ಬೆಲೆಯ ನಾಲ್ಕು ಪಟ್ಟು ಪರಿಹಾರ - High Speed ​​Bullet Train Project

ಕೋಲಾರದಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಅವರ ಜಮೀನಿನ ಬೆಲೆಯ ನಾಲ್ಕು ಪಟ್ಟು ಪರಿಹಾರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Kolara
ಕೋಲಾರ (ETV Bharat)

By ETV Bharat Karnataka Team

Published : Jul 19, 2024, 4:10 PM IST

Updated : Jul 19, 2024, 9:44 PM IST

ಕೋಲಾರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚೆನ್ನೈ- ಬೆಂಗಳೂರು- ಮೈಸೂರು ಹೈಸ್ಪೀಡ್​ ಬುಲೆಟ್​ ರೈಲು ಯೋಜನೆಯ ಕಾರಿಡಾರ್​ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪೂರ್ವಸಿದ್ಧತೆ ನಡೆಯುತ್ತಿದೆ. ಸುಮಾರು 463 ಕಿ.ಮೀ. ಉದ್ದದ ಹಳಿಯಲ್ಲಿ 70 ಕಿ.ಮೀ. ಮಾರ್ಗ ಕೋಲಾರ ಜಿಲ್ಲೆಯಲ್ಲಿ ಹಾದು ಹೋಗಲಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಸರ್ವೇ ಕಾರ್ಯವನ್ನು ಈಗಾಗಲೇ ಮಾಡಿದ್ದು, ಕೆಲವೆಡೆ ಹೊಲ ಗದ್ದೆಗಳನ್ನು ಕಳೆದುಕೊಳ್ಳುವ ರೈತರನ್ನು ಕರೆಸಿ ಜಿಲ್ಲಾಡಳಿತ ಸಭೆ ನಡೆಸಿದೆ. ಜಮೀನು ಕಳೆದುಕೊಳ್ಳುವ ರೈತರಿಗೆ ಅವರ ಜಮೀನಿನ ಬೆಲೆಯ ನಾಲ್ಕರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.

ಚೆನ್ನೈ - ಮೈಸೂರು ಹೈಸ್ಪೀಡ್​ ಬುಲೆಟ್​ ರೈಲು ಯೋಜನೆ (ETV Bharat)

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ ರೈಲ್ವೆ ಯೋಜನೆ ಇದಾಗಿದ್ದು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವಂತಹ ಯೋಜನೆಯಾಗಿದೆ. ಬುಲೆಟ್‌ ರೈಲು ಚೆನ್ನೈನಿಂದ ಶುರುವಾಗಿ, ಮೈಸೂರಿನಲ್ಲಿ ಕೊನೆಗೊಳ್ಳಲಿದೆ. ಚೆನ್ನೈನಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಎರಡು ಹಂತದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ, "ಚೆನ್ನೈ- ಬೆಂಗಳೂರು - ಮೈಸೂರಿಗೆ ಎಕ್ಸ್​ಪ್ರೆಸ್​ ಬುಲೆಟ್​ ಟ್ರೈನ್​ ಅನ್ನು ಹಾಕುವಂತಹ ಯೋಜನೆಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆ ನಂತರ ಪರಿಸರದ ಮೇಲಾಗುವ ಪರಿಣಾಮ ಹಾಗೂ ಜನರ ಮೇಲಾಗುವಂತಹ ಪರಿಣಾಮಗಳ ಬಗ್ಗೆ ಪ್ರಯೋಗ ಮಾಡಿ, ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಯ ಪ್ರಕಾರ, ಭೂಮಿ ಕಳೆದುಕೊಳ್ಳುವಂತಹ ರೈತರನ್ನು ಕರೆದು ಮಾತನಾಡುವಂತಹ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ." ಎಂದು ಹೇಳಿದರು.

"ಇದರಲ್ಲಿ ಯಾವುದೇ ತಳಮಟ್ಟದಲ್ಲಿ ಟ್ರ್ಯಾಕ್​ ಅನ್ನು ಹಾಕಲಾಗುವುದಿಲ್ಲ. ಸೇತುವೆ ಹಾಗೂ ಸುರಂಗ ಮಾರ್ಗದ ಮಾದರಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಬುಲೆಟ್​ ಟ್ರೈನ್​ 250 ರಿಂದ 300 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಒಂದು ಬಾರಿ ಸುಮಾರು 730 ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತಹ ಸಾಮರ್ಥ್ಯ ಹೊಂದಿರಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೇಳಿಕೊಂಡಿರುವಂತೆ ಜಿಲ್ಲಾಡಳಿತದಿಂದ ಭೂಸ್ವಾಧೀನ ಮಾಡಿಕೊಡಬೇಕಾಗಿರುತ್ತದೆ. ಕಾರಿಡಾರ್​ ಹಾದುಹೋಗುವಂತಹ ಜಾಗದಲ್ಲಿ 17 ಮೀಟರ್ ಅಂದರೆ 55 ಅಡಿಯಷ್ಟು ಅಗಲ ಜಾಗವನ್ನು ಭೂಸ್ವಾಧೀನ ಮಾಡುತ್ತೇವೆ. ಹೀಗೆ 70 ಕಿ.ಮೀ. ದೂರಕ್ಕೆ ಸುಮಾರು 167 ಹೆಕ್ಟೇರ್​ ಅಷ್ಟು ಭೂಮಿಯನ್ನು ಸ್ವಾಧೀನ ಮಾಡಬೇಕಾಗುತ್ತದೆ. 305 ಕಿ.ಮೀ.ಗಳಲ್ಲಿ ಒಟ್ಟು 11 ನಿಲ್ದಾಣಗಳಿದ್ದು, ಅದರಲ್ಲಿ ಬೆಂಗಳೂರು ಬಿಟ್ಟರೆ ಕೋಲಾರದ ಹುದುಕುಳದಲ್ಲಿ ಒಂದು ನಿಲ್ದಾಣ ಸಿಗಲಿದೆ." ಎಂದು ತಿಳಿಸಿದರು.

"ಒಂದು ಗಂಟೆಯಲ್ಲಿ ಚೆನ್ನೈಗೆ ತಲುಪುವಂತಹ ವ್ಯವಸ್ಥೆ ಇದಾಗಿದೆ. ನಾವು ಆದಷ್ಟು ಬೇಗ ಭೂಸ್ವಾಧೀನ ಮಾಡಿಕೊಟ್ಟರೆ, ಕೇಂದ್ರ ಆದಷ್ಟು ಬೇಗ ಯೋಜನೆಯನ್ನು ಜಾರಿಗೆ ತರಲಿದೆ. ಇಲ್ಲಿ ರೈಲ್ವೆ ಯೋಜನೆಯಲ್ಲಿ ರೈತರ ಭೂಮಿಗೆ, ಅದರ ಬೆಲೆಯ ನಾಲ್ಕು ಪಟ್ಟು ಹಣ ನೀಡಲು ಕೇಂದ್ರ ನಿರ್ಧರಿಸಿದೆ. ಜೊತೆಗೆ ರೈತರ ಕಟ್ಟಡ, ಅಥವಾ ಮರಗಳಿದ್ದಲ್ಲಿ, ಅದಕ್ಕೆ ಹೆಚ್ಚುವರಿ ಹಣ ಸಿಗಲಿದೆ. ಕಾರಿಡಾರ್​ನ ಸೇತುವೆಗಳು 10-15 ಮೀಟರ್​ ಎತ್ತರದಲ್ಲಿರಲಿದೆ. ಇದರಿಂದ ರೈತರು ಕೂಡ ತಮ್ಮ ಹೊಲಗಳಿಗೆ ಅಡ್ಡಾಡಲು ಯಾವುದೇ ಸಮಸ್ಯೆಗಳಾಗುವುದಿಲ್ಲ. ಜೊತೆಗೆ ಕೆಳಗಡೆ ಇರುವಂತಹ ಪ್ರದೇಶದಲ್ಲಿ 4 ಮೀಟರ್​ ಅಗಲದ ಸರ್ವೀಸ್​ ರಸ್ತೆಯನ್ನು ಕೂಡ ಅವರೇ ಮಾಡಿಕೊಡುತ್ತಾರೆ." ಎಂದು ವಿವರಿಸಿದರು.

"ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಹಲವಾರು ಸೌಲಭ್ಯಗಳು ಜಿಲ್ಲೆಗೂ ದೊರೆಯಲಿದೆ. ಇನ್ನು ಇದರಿಂದ ವಿವಿಧ ಕೈಗಾರಿಕೆಗಳು ಜಿಲ್ಲೆಯಲ್ಲಿ ತಲೆ ಎತ್ತಲಿವೆ. ಉದ್ಯೋಗದ ವ್ಯವಸ್ಥೆ ಆಗಲಿದ್ದು, ಸಾರ್ವಜನಿಕರಿಗೂ ತುಂಬಾ ಅನುಕೂಲವಾಗಲಿದೆ. ಈಗಾಗಲೇ ಸರ್ವೇ ಕಾರ್ಯ ನಡೆದಿರುವುದರಿಂದ ಪರಿಸರದ ಮೇಲೆ ಆಗುವಂತಹ ಪರಿಣಾಮಗಳನ್ನು ಅರಿತ ನಂತರ ಕೇಂದ್ರ ಸರ್ಕಾರ ಯೋಜನೆಗೆ ಅನುಮೋದನೆ ನೀಡಲಿದೆ."

ಇದನ್ನೂ ಓದಿ:ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆ ಶೀಘ್ರದಲ್ಲಿ ಅನುಷ್ಠಾನ: ಸಚಿವ ಬೋಸರಾಜು - WATER TREATMENT PLANT

Last Updated : Jul 19, 2024, 9:44 PM IST

ABOUT THE AUTHOR

...view details