ಕರ್ನಾಟಕ

karnataka

ETV Bharat / state

ಬಿಜೆಪಿ ಕಚೇರಿ ಸ್ಫೋಟಿಸುವ ಸಂಚು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ: ಗೃಹ ಸಚಿವ ಪರಮೇಶ್ವರ್ - Rameshwaram Cafe Blast

ಬಿಜೆಪಿ ಕಚೇರಿ ಸ್ಫೋಟಿಸಲು ಶಂಕಿತರು ಸಂಚು ರೂಪಿಸಿದ್ದರು ಎಂಬುದು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಚಾರ್ಜ್​ಶೀಟ್​ನಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್ (ETV Bharat)

By ETV Bharat Karnataka Team

Published : Sep 10, 2024, 1:47 PM IST

ಬೆಂಗಳೂರು:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೊಂಡಿದ್ದು, ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ಕಚೇರಿ ಸ್ಫೋಟಿಸುವ ಬಗ್ಗೆ ಸಂಚು ನಡೆಸಿದ್ದರು ಎಂಬ ಅಂಶ ಉಲ್ಲೇಖಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವಂತೆ ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ಶಂಕಿತರು ಸಂಚು ರೂಪಿಸಿದ್ದರು. ಸ್ಫೋಟಕ ತೆಗೆದುಕೊಂಡು ಬಿಜೆಪಿ ಕಚೇರಿ ಬಳಿ ತೆರಳಿ ಅಲ್ಲಿ ಇಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸ್ ಬಂದು ಬೈಕ್​ನಲ್ಲಿ ಇಟ್ಟಿರುವುದಾಗಿ ಶಂಕಿತರು ಹೇಳಿರುವುದು ಚಾರ್ಜ್​ಶೀಟ್​ನಲ್ಲಿದೆ ಎಂದು ಮಾಹಿತಿ ನೀಡಿದರು.

ರೇಣುಕಾಸ್ವಾಮಿ ಕೊಲೆ‌ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಅಂಶ ಬಹಿರಂಗವಾಗುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರಶ್ನೆಗೆ ಪ್ರತಿಕ್ರಿಯಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಪ್ರಕರಣದ ವಿರುದ್ಧ ವಾದಿಸುವ ವಕೀಲರಿಗೂ ಚಾರ್ಜ್‌ಶೀಟ್ ನೀಡಲಾಗುತ್ತದೆ. ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನೂ ಅಲ್ಲ. ಸಹಜವಾಗಿ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ಹೊರಗೆ ಬರುತ್ತದೆ. ಕೋರ್ಟ್‌ ಏನು ತೀರ್ಮಾನ ಮಾಡುತ್ತದೆ ನೋಡೋಣ ಎಂದು ಹೇಳಿದರು.

ಸಾರ್ವಜನಿಕವಾಗಿ ಮಾತನಾಡುವುದನ್ನು ಕೋರ್ಟ್ ಪರಿಗಣಿಸುವುದಿಲ್ಲ. ಸಾಕ್ಷ್ಯ, ದಾಖಲೆಗಳ ಆಧಾರದ ಮೇಲೆ ಪ್ರಕರಣ ನಡೆಯುತ್ತದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿ, ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ನೀಡುತ್ತಾರೆ.‌ ಆ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಯುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.

ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗೆ ಕಡಿವಾಣ ಹಾಕಲು ಹೈಕಮಾಂಡ್‌ಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಮುಖ್ಯಮಂತ್ರಿಗಳ ಸ್ಥಾನದ‌ ಬಗ್ಗೆ ಚರ್ಚೆ ಅನಗತ್ಯ ಎಂಬ ವಿಚಾರವನ್ನು ನಾನೂ ಸಹ ಹೇಳಿದ್ದೇನೆ. ಮಾಧ್ಯಮದವರು ಮುಖ್ಯಮಂತ್ರಿಯಾಗುತ್ತೀರಾ ಎಂದು ಕೇಳಿದಾಗ, ನಾವು ಬೇಡ ಅಂತ ಯಾಕೆ ಹೇಳಬೇಕು ಅಂತ ನನಗೆ ಆ ಸ್ನೇಹಿತರು ಹೇಳಿದ್ದಾರೆ. ಅಷ್ಟು ಬಿಟ್ಟರೆ ಬೇರೆ ಏನೂ ಇಲ್ಲ ಎಂದರು.

ಸಚಿವ ಎಂ.ಬಿ.ಪಾಟೀಲ್ ಅವರು ಇಲಾಖೆಯ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾರೆ‌. ನಾನೂ ಸಹ ಗೃಹ ಇಲಾಖೆಗೆ ಸಂಬಂಧಿಸಿದ ಕೆಲಸ ಇದ್ದರೆ ದೆಹಲಿಗೆ ಹೋಗುತ್ತೇನೆ. ದೆಹಲಿಗೆ ಹೋದಾಕ್ಷಣ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಮಾಡಲು ಹೋಗಿದ್ದರು ಅಂತ ಹೇಳಿ ಬಿಟ್ಟರೆ ಹೇಗೆ? ಈ ಬಗ್ಗೆ ಚರ್ಚೆಯೇ ಅನಗತ್ಯ ಎಂದು ಹೇಳಿದರು‌.

ಇದನ್ನೂ ಓದಿ:ರಾಮೇಶ್ವರಂ ಕೆಫೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ: ರಾಜ್ಯ ಬಿಜೆಪಿ ಕಚೇರಿ ಸ್ಫೋಟಕ್ಕೆ ಯತ್ನಿಸಿದ್ದ ಆರೋಪಿಗಳು - Rameswaram Cafe Blast Case

ABOUT THE AUTHOR

...view details