ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಾಜ್ಯದ ಗಮನ ಸೆಳೆಯುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯು ಕ್ಷೇತ್ರದಲ್ಲಿ ಪಕ್ಷದ ಚಿಹ್ನೆ ವಿನಿಮಯ ಮಾಡುವ ಹೊಸ ತಂತ್ರಗಾರಿಕೆ ಹೆಣೆದಿದೆ. ಇದರಿಂದಾಗಿ ಈ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಚಿಹ್ನೆ ದೊರೆಯುತ್ತಿರುವುದು ಬಹುತೇಕ ಫಿಕ್ಸ್ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕೈ, ಕಮಲ ಪಕ್ಷಕ್ಕೆ ಪ್ರತಿಷ್ಠೆಯ ಉಪ ಚುನಾವಣೆ:ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಈಗ ರಾಜ್ಯದ ಜನರ ಕಣ್ಣು ಉಪ ಚುನಾವಣೆಯ ಮೇಲೆ ನೆಟ್ಟಿದೆ. ಶಾಸಕರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಹಾವೇರಿಯ ಶಿಗ್ಗಾಂವಿ, ರಾಮನಗರದ ಚನ್ನಪಟ್ಟಣ, ವಿಜಯನಗರದ ಸಂಡೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಹೆಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣಕ್ಕೆ ಡಿ.ಕೆ.ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಇದರಿಂದಾಗಿ ಪ್ರತಿಷ್ಠೆಯ ಕ್ಷೇತ್ರವಾಗಿದೆ. 'ಡಿಕೆ ಬ್ರದರ್ಸ್' ಸೋಲಿಸಲು ಮೈತ್ರಿ ಪಕ್ಷ ಚಿಹ್ನೆ ವಿನಿಯಮದಡಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದೆ. ಆದರೆ ಮೈತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವರ ಹೆಸರಿದ್ದು, ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಜೆಡಿಎಸ್ ಚಿಹ್ನೆಯಿಂದಲೇ ಚುನಾವಣೆಗೆ ಸ್ಪರ್ಧೆ:ಚನ್ನಪಟ್ಟಣ ಜೆಡಿಎಸ್ ಪಕ್ಷದ ಭದ್ರಕೋಟೆ. ಈ ಕ್ಷೇತ್ರ ಹೇಳಿ ಕೇಳಿ ಪ್ರಸ್ತುತ ಕೇಂದ್ರ ಸಂಪುಟ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ನಿಕಟಪೂರ್ವ ಶಾಸಕರಾಗಿದ್ದ ಕ್ಷೇತ್ರವಾಗಿದೆ. ಅಲ್ಲದೇ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ಟಾಂಗ್ ಕೊಡಬೇಕಾದರೆ ಈ ಕ್ಷೇತ್ರದಲ್ಲಿ ಬಲಿಷ್ಠ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು. ಈ ಕ್ಷೇತ್ರದಲ್ಲಿ ಜೆಡಿಎಸ್ ಚಿಹ್ನೆಯಡಿ ಮೈತ್ರಿ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರಿಂದಾಗಿ ನಿಖಿಲ್ ಕುಮಾರಸ್ವಾಮಿ ಅಥವಾ ಜಯಮುತ್ತು ಅವರನ್ನೇ ಅಭ್ಯರ್ಥಿಯನ್ನಾಗಿಸಬೇಕೆಂಬ ಕೂಗು ಪಕ್ಷದಲ್ಲಿ ಕೇಳಿ ಬರುತ್ತಿದೆ. ಮತ್ತೊಂದೆಡೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಜೆಡಿಎಸ್ ಚಿಹ್ನೆಯಿಂದ ನಿಲ್ಲಿಸುವ ತಂತ್ರವೂ ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಚನ್ನಪಟ್ಟಣ ಉಪ ಚುನಾವಣೆ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಫೈಟ್ ಆಗಿದೆ. ಅಭ್ಯರ್ಥಿಗಳಾಗಿ ಕಣಕ್ಕೆ ಯಾರೇ ಬಂದ್ರೂ ಇಬ್ಬರಿಗೂ ಇದು ಪ್ರತಿಷ್ಠೆಯ ಚುನಾವಣೆ. ಡಿ.ಕೆ.ಶಿವಕುಮಾರ್ ಅವರು ಶತಾಯಗತಾಯ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕೆಂಬ ಪಣ ತೊಟ್ಟಿದ್ದರೆ, ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಿರುವುದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಅನಿವಾರ್ಯ. ಹೀಗಾಗಿ, ಉಪಚುನಾವಣಾ ಕಣ ರಂಗೇರಿದೆ.
ಇದನ್ನೂ ಓದಿ: ಕುಮಾರಸ್ವಾಮಿ ಚನ್ನಪಟ್ಟಣ ನೋಡೋದಕ್ಕೆ ಮೊದಲೇ ನಾನು ನೋಡಿದ್ದೇನೆ: ಡಿ.ಕೆ. ಶಿವಕುಮಾರ್ - DK Shivakumar