ಚಾಮರಾಜನಗರ:ಪಕ್ಷದ ವಿಪ್ ಉಲ್ಲಂಘಿಸಿದ ಹಿನ್ನೆಲೆ ಚಾಮರಾಜನಗರ ನಗರಸಭೆಯ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ಅನರ್ಹ ಮಾಡಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ. ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಗೈರಾಗಿದ್ದ ಆರ್.ಪಿ.ನಂಜುಂಡಸ್ವಾಮಿ, ನೀಲಮ್ಮ, ಭಾಗ್ಯಮ್ಮ ಹಾಗೂ ಬಿಜೆಪಿಗೆ ಮತ ಚಲಾಯಿಸಿದ್ದ ಚಂದ್ರಕಲಾ ಅನರ್ಹಗೊಂಡ ನಗರಸಭೆ ಕಾಂಗ್ರೆಸ್ ಸದಸ್ಯರು.
ಪಕ್ಷದ ವಿಪ್ ಉಲ್ಲಂಘನೆ ಹಿನ್ನೆಲೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಅವರು ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಾದ-ಪ್ರತಿವಾದ ಆಲಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ವಿಪ್ ಉಲ್ಲಂಘನೆ ಮಾಡಿ ಉದ್ದೇಶಪೂರ್ವಕವಾಗಿ ಗೈರಾಗಿರುವುದು ಮತ್ತು ವಿರುದ್ಧ ಮತ ಚಲಾಯಿಸಿದ್ದು ಕಂಡು ಬಂದಿದ್ದರಿಂದ ನಾಲ್ವರು ಸದಸ್ಯರನ್ನು ಅನರ್ಹ ಮಾಡಿ ಆದೇಶಿಸಿದ್ದಾರೆ.
ಬಹುಮತವಿದ್ದರೂ ಮುಗ್ಗರಿಸಿದ್ದ ಕಾಂಗ್ರೆಸ್:ಕಳೆದ ಅ.9 ರಂದು ನಡೆದಿದ್ದ ಚಾಮರಾಜನಗರ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪ್ಲಾನ್ ಸಕ್ಸಸ್ ಆದ ಪರಿಣಾಮ ಗೆಲುವಿನ ಹೊಸ್ತಿಲಲ್ಲಿದ್ದ ಕಾಂಗ್ರೆಸ್ ಮುಗ್ಗರಿಸಿ ಬಿದ್ದಿತ್ತು. 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ನ ಮೂವರು ಸದಸ್ಯರು ಗೈರಾದ ಪರಿಣಾಮ ಅನಾಯಸವಾಗಿ ಬಿಜೆಪಿ 2 ನೇ ಬಾರಿಗೆ ಗದ್ದುಗೆ ಏರಿತ್ತು. ಬಿಜೆಪಿಯ ಸುರೇಶ್ ನಾಯಕ್ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮಮತಾ ಬಾಲಸುಬ್ರಹ್ಮಣ್ಯ ಆಯ್ಕೆಯಾಗಿದ್ದರು.