ಚಾಮರಾಜನಗರ: ಕಾಂಗ್ರೆಸ್ ಸಿಇಸಿ ಸಭೆಗೂ ಮುನ್ನವೇ ಸಚಿವ ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅವರ ನಾಮಪತ್ರ ಸಲ್ಲಿಸುವ ದಿನಾಂಕ ಫಿಕ್ಸ್ ಆಗಿದ್ದು, ಏ.3 ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಚಾರದ ಪ್ರವಾಸಪಟ್ಟಿ ಹೊರಡಿಸಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವರ ಅನುಮತಿಯೊಂದಿಗೆ ಪ್ರವಾಸಪಟ್ಟಿ ಹೊರಡಿಸಿದ್ದು, ಸುನೀಲ್ ಬೋಸ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಹೆಸರಿಸಲಾಗಿದೆ. ಇಂದು ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಸಿಇಸಿ ಸಭೆ ನಡೆಯಲಿದ್ದು, ಬಳಿಕ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಮೈಸೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಏ.1 ಹಾಗೂ 2 ರಂದು ಕಾರ್ಯಕರ್ತರ ಸಭೆ ನಡೆಸಲಿದ್ದು, ಏ.3ರ ಬೆಳಗ್ಗೆ 11ಕ್ಕೆ ಸುನಿಲ್ ಬೋಸ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪ್ರವಾಸ ಪಟ್ಟಿಯಲ್ಲಿ ತಿಳಿಸಲಾಗಿದೆ. ತೀವ್ರ ಕಗ್ಗಂಟಾಗಿ ಉಳಿದಿದ್ದ ಕಾಂಗ್ರೆಸ್ನ ಟಿಕೆಟ್ ಕೊನೆಗೂ ತಮ್ಮ ಪುತ್ರನಿಗೆ ಕೊಡಿಸುವಲ್ಲಿ ಮಹದೇವಪ್ಪ ಯಶಸ್ವಿಯಾಗಿದ್ದಾರೆ. ಇನ್ನು, ಚಾಮರಾಜನಗರದ ಕೈ ಶಾಸಕರು ಈಗಾಗಲೇ ಮುಖಂಡರ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ಹೆಣೆದಿದ್ದಾರೆ.
ಇದನ್ನೂ ಓದಿ:ಬೆಳಗಾವಿ, ಚಿಕ್ಕೋಡಿಯಲ್ಲಿ ಸಚಿವರ ಮಕ್ಕಳಿಗೆ ಮಣೆ: ಬಿಜೆಪಿ ಹಿರಿಯರ ವಿರುದ್ಧ ಅಖಾಡಕ್ಕೆ ಧುಮುಕಿದ ಕಿರಿಯರು - Lok Sabha Election