ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಬೆಂಗಳೂರು : ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ-2024ರ ಚರ್ಚೆ ವೇಳೆ ದಲಿತ ಸಿಎಂ ಮಾಡುವ ಬಗ್ಗೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಾಐಕರು ಪರಸ್ಪರ ಸವಾಲು- ಪ್ರತಿಸವಾಲು ಹಾಕಿದರು.
ವಿಧಾನಸಭೆಯಲ್ಲಿ ಚರ್ಚೆ ವೇಳೆ ಸಹಕಾರ ಸಂಘಗಳಲ್ಲಿ ಬಿಜೆಪಿ, ಜೆಡಿಎಸ್ನವರು ಮೀಸಲಾತಿ ವಿರೋಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆರೋಪಿಸಿದರು. ಶಾಸಕ ನರೇಂದ್ರಸ್ವಾಮಿ ಆರೋಪಕ್ಕೆ ಶಾಸಕ ಯತ್ನಾಳ್ ಆಕ್ಷೇಪಿಸುತ್ತಾ, ನಾವು ಮೀಸಲಾತಿ ವಿರೋಧಿಗಳಲ್ಲ. ಮುಂಬಡ್ತಿಯಲ್ಲಿ ಮೀಸಲಾತಿ ತಂದವರು ಅಟಲ್ ಬಿಹಾರಿ ವಾಜಪೇಯಿ. ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಳ ಮಾಡಿದವರು ಬಸವರಾಜ ಬೊಮ್ಮಾಯಿ ಅವರು. ನಿಮಗೆ ಹೇಳಲು ನೈತಿಕತೆ ಏನಿದೆ? ಎಂದು ಆಕ್ಷೇಪಿಸಿದರು.
ನಿಮ್ಮ ರೀತಿ ಮಾತನಾಡುವುದಾದ್ರೆ ಪಂಚಾಯತಿ ಸದಸ್ಯತ್ವದಲ್ಲಿ ಮಾತ್ರ ಮೀಸಲಾತಿನಾ?. ತಾಲೂಕು ಪಂಚಾಯತಿಗೆ ಬೇಡವೇ?. ಜಿಲ್ಲಾ ಪಂಚಾಯತಿಯಲ್ಲಿ ಬೇಡವೇ ?. ವಿಧಾನಸಭೆಯಲ್ಲಿ ಮೀಸಲಾತಿ ಬೇಡವೇ?. ಲೋಕಸಭೆಯಲ್ಲಿ ಮೀಸಲಾತಿ ಬೇಡವೇ?. ಮೇಲ್ಮಟ್ಟದ ಸಂಸ್ಥೆಗಳಲ್ಲಿ ನಮಗೆ ಮೀಸಲಾತಿ ಕೊಡಿ. ನಮ್ಮನ್ನೂ ನಿಮ್ಮಂತೆ ಮನುಷ್ಯರಂತೆ ನೋಡಿ. ನೀವು ಕೊಡುತ್ತಿರುವುದು ಭಿಕ್ಷೆ ಅಲ್ಲ. ಮೀಸಲಾತಿ ನಮ್ಮ ಹಕ್ಕು ಎಂದು ನರೇಂದ್ರ ಸ್ವಾಮಿ ಹೇಳಿದರು.
ಆಗ ಎದ್ದು ನಿಂತ ಯತ್ನಾಳ್, ಡಾ. ಜಿ ಪರಮೇಶ್ವರ್ ಅವರನ್ನು ನಿಮ್ಮ ಪಕ್ಷದಲ್ಲಿ ಸಿಎಂ ಮಾಡಿ ನೋಡೋಣ. ಯಾರು ಬೇಡ ಅಂತಾರೆ. ನಾನು ನಿಮಗೆ ವೋಟ್ ಹಾಕ್ತೀನಿ. ಪರಮೇಶ್ವರ್ ಅವರನ್ನು ಸಿಎಂ ಮಾಡಿ. ಬರೀ ದಲಿತರ ಬಗ್ಗೆ ಮಾತನಾಡುವುದು ಅಲ್ಲ. ನಿಮಗೆ ಧಮ್ ಇದೆಯಾ?. ನಿಮಗೆ ತಾಕತ್ ಇದೆಯಾ? ಎಂದು ನರೇಂದ್ರಸ್ವಾಮಿಗೆ ಸವಾಲೆಸೆದರು. ಆಗ ನರೇಂದ್ರ ಸ್ವಾಮಿ ನೀವು ಕಾಂಗ್ರೆಸ್ಗೆ ಬಂದ್ರೆ ನಾವು ಪರಮೇಶ್ವರ್ ಅವರನ್ನು ಸಿಎಂ ಮಾಡ್ತೀವಿ ಎಂದು ತಿರುಗೇಟು ನೀಡಿದರು.
ಆಗ ಮಧ್ಯ ಪ್ರವೇಶಿಸಿದ ಯತ್ನಾಳ್, ನರೇಂದ್ರ ಸ್ವಾಮಿಗೆ ನೀವು ಡಿಸಿಎಂ ಆಗಿ ನಾವು ಬೆಂಬಲ ಕೊಡುತ್ತೇವೆ ಎಂದು ಸವಾಲು ಹಾಕಿದರು. ಆಗ ಮಧ್ಯ ಪ್ರವೇಶಿಸಿದ ಲಕ್ಷ್ಮಣ್ ಸವದಿ, ನೀವು ದಲಿತರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿ. ನಿಮಗೆ ಧಮ್ ಇದೆಯಾ?. ನಿಮಗೆ ತಾಕತ್ ಇದೆಯಾ ಎಂದು ಪ್ರತಿ ಸವಾಲು ಹಾಕಿದರು.
ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಜಟಾಪಟಿ : ಸಹಕಾರ ಸಂಘಗಳ ವಿಧೇಯಕದ ಬಗ್ಗೆ ಚರ್ಚೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಸೂದೆ ಬಗ್ಗೆ ಮಾತನಾಡಿದ ಬಿಜೆಪಿ ಸದಸ್ಯ ಸಿದ್ದು ಸವದಿ, ಈ ಕಾಯ್ದೆ ಮೂಲಕ ಮರಣ ಶಾಸನ ಮಾಡಲು ಹೊರಟಿದ್ದಾರೆ. ಇದು ನಿಜಕ್ಕೂ ಕಪ್ಪು ಚುಕ್ಕೆ. ಈ ಸಂಸ್ಥೆಗಳನ್ನು ಗಂಜಿ ಕೇಂದ್ರಗಳನ್ನಾಗಿ ಮಾಡಲು ಹೊರಟಿದ್ದಾರೆ. ಅವರ ಪಕ್ಷದಲ್ಲಿ ಯಾರಿಗೆ ಅವಕಾಶ ಸಿಕ್ಕಿಲ್ಲವೋ ಅಂತಹವರಿಗೆ ಗಂಜಿ ಕೇಂದ್ರ ಮಾಡಲು ಹೊರಟಿದ್ದಾರೆಂದು ಆಕ್ಷೇಪಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಕೆ. ಎನ್ ರಾಜಣ್ಣ, ನಿರಾಶ್ರಿತರ ಕೇಂದ್ರಗಳನ್ನಾಗಿ ಮಾಡುತ್ತಾರೆಂಬುದು ಸರಿಯಲ್ಲ. ಇದನ್ನ ಕಡತದಿಂದ ತೆಗೆದುಹಾಕಿ ಎಂದು ಸ್ಪೀಕರ್ ರನ್ನು ಒತ್ತಾಯಿಸಿದರು. ಈ ವೇಳೆ ಸಿದ್ದು ಸವದಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಸದಸ್ಯ ನರೇಂದ್ರ ಸ್ವಾಮಿ, ಜಾತಿ ಬಗ್ಗೆ ಮಾತಾಡ್ತೀರಲ್ರೀ, ಇದು ನಿಮ್ಮ ಭಿಕ್ಷೆ ಅಲ್ಲ. ನಿಮ್ಮಪ್ಪನ ಮನೆಯಿಂದ ಇದು ಬಂದಿಲ್ಲ. ಸಂವಿಧಾನ ಕೊಟ್ಟಿರೋದು. ಹುಷಾರಾಗಿ ಮಾತಾಡ್ರಿ ಎಂದು ಏರುಧ್ವನಿಯಲ್ಲಿ ಮಾತನಾಡಿದರು.
ನಿಮ್ಮದು ಪಿತ್ರಾರ್ಜಿತ ಆಸ್ತಿ ಅಲ್ಲ :ಆಗ ಸಿದ್ದು ಸವದಿ, ಏನು ಧಮ್ಕಿ ಹಾಕ್ತೀರಾ, ನೀವು ಹುಷಾರಾಗಿ ಮಾತಾಡಿ. ನಿಮ್ಮದು ಪಿತ್ರಾರ್ಜಿತ ಆಸ್ತಿ ಅಲ್ಲ ಎಂದು ನರೇಂದ್ರ ಸ್ವಾಮಿಗೆ ತಿರುಗೇಟು ನೀಡಿದರು. ಆಗ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಸಿದ್ದು ಸವದಿ ಮೀಸಲಾತಿ ಬಗ್ಗೆ ಮಾತನಾಡಿಲ್ಲ. ಅವರು ನಾಮನಿರ್ದೇಶನದ ಕುರಿತು ಮಾತನಾಡಿದ್ದಾರೆ. ಕಡತದಿಂದ ಅದನ್ನು ತೆಗೆದುಹಾಕಿ ಎಂದು ಮನವಿ ಮಾಡಿದರು.
ಇದನ್ನೂ ಓದಿ :ಕೇಂದ್ರ ನಾಯಕರ ಜೊತೆಗಿನ ಭೇಟಿ ಫಲಪ್ರದವಾಗಿದೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್