ಮೈಸೂರು: ಲೋಕಸಭೆ ಚುನಾವಣೆಗೆ ಚಾಮರಾಜನಗರ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಕೆ. ಶಿವರಾಂ ಅವರ ಪತ್ನಿ ವಾಣಿ ಶಿವರಾಂ ಅವರನ್ನು ಕಣಕ್ಕಿಳಿಸಲು ಛಲವಾದಿ ಮಹಾಸಭಾ ಸಜ್ಜಾಗಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್ ಹೇಳಿದ್ದಾರೆ.
ನಂಜನಗೂಡು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಶಿವರಾಂ ಅವರು ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ನೊಂದವರ ಪರವಾಗಿ ಕೆಲಸ ಮಾಡಿದ್ದಾರೆ. ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಂಚರಿಸಿ ಸಂಘಟನೆ ಮಾಡಿದ್ದರು. ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ, ಇವತ್ತು ನಮ್ಮೊಟ್ಟಿಗೆ ಇಲ್ಲ. ಈ ಬಾರಿ ಸಂಸದರಾದ ವಿ. ಶ್ರೀನಿವಾಸ್ ಪ್ರಸಾದ್ ಅವರ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಶ್ರೀನಿವಾಸ್ ಪ್ರಸಾದ್ ಅವರ ಅಳಿಯನಿಗೆ ಟಿಕೆಟ್ ನೀಡುವ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆ. ಶಿವರಾಂ ಅವರ ಪತ್ನಿ ವಾಣಿ ಶಿವರಾಂ ಅವರ ಜೊತೆ ನಾವು ಮಾತುಕತೆ ನಡೆಸಿದ್ದೇವೆ. ವಾಣಿ ಶಿವರಾಂ ಅವರು ಒಲ್ಲದ ಮನಸ್ಸಿನಲ್ಲಿ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ವಾಣಿ ಶಿವರಾಂ ಅವರು ಸ್ಪರ್ಧೆ ಮಾಡಿದ್ದೆ ಆದಲ್ಲಿ ಅತಿ ಹೆಚ್ಚು ಬಹುಮತದಿಂದ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.