ಬೆಂಗಳೂರು:ಕೇಂದ್ರ ಬಿಡುಗಡೆ ಮಾಡಿರುವ ಬರ ಪರಿಹಾರವನ್ನು ಬಿರಿಯಾನಿಗೆ ಕೊಟ್ಟರೆ ಹುಷಾರ್. ಈ ಹಣ ರೈತರಿಗೇ ಸೇರಬೇಕು. ಕೇಂದ್ರದ ಬರ ಪರಿಹಾರದಲ್ಲಿ ಲೂಟಿ ಹೊಡೆಯಬಾರದು. ನಾವು ಕೇಂದ್ರದ ಹಣಕ್ಕೆ ಕಾವಲು ಕಾಯುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣೆ ಮಾಧ್ಯಮ ಕೇಂದ್ರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಬರಕ್ಕೆ ಸಂಬಂಧಿಸಿದಂತೆ ಸ್ಪಂದಿಸಿದೆ. ರಾಜ್ಯದ ಜನರ ಸಂಕಷ್ಟಕ್ಕೆ ಮೋದಿಯವರು ಮಿಡಿದಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಾಗೂ ರಾಜ್ಯ ಸರ್ಕಾರದ ವಿಳಂಬ ಮನವಿಯಿಂದ ಬರ ಪರಿಹಾರ ಈಗ ಬಿಡುಗಡೆ ಆಗಿದೆ. ಚುನಾವಣೆ ಆಯೋಗಕ್ಕೆ ಬರ ಪರಿಹಾರ ಬಿಡುಗಡೆಗೆ ಅನುಮತಿ ಕೇಳಿದ್ದು, ಕೇಂದ್ರ ಬರ ಪರಿಹಾರ ಕೊಟ್ಟಿದ್ದು ಕೇಂದ್ರ ರಾಜ್ಯದ ಕಾಂಗ್ರೆಸ್ ನಾಯಕರು ಯೋಗ್ಯತೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಖಜಾನೆ ಖಾಲಿಯಾಗಿದೆ. ಬರ ಪರಿಹಾರ ಕೊಡಲು ಅವರಿಗೆ ಯೋಗ್ಯತೆ ಇಲ್ಲ. ಕೋರ್ಟ್ಗೆ ಹೋದ ಹಿನ್ನೆಲೆ ಬರ ಪರಿಹಾರ ಬಂದಿದೆ ಅನ್ನೋದು ಸುಳ್ಳು, ಕಾಂಗ್ರೆಸ್ ನಾಯಕರು ಶುದ್ಧ ಸುಳ್ಳು ಹೇಳುತ್ತಿದ್ದಾರೆ. ಹಾಗಿದ್ದರೆ ಕೋರ್ಟ್ ಗೆ ಹೋದವರಿಗೆ ಮಾತ್ರ ಪರಿಹಾರ ಬಿಡುಗಡೆ ಆಗಬೇಕಿತ್ತು. ಆದರೆ ಕರ್ನಾಟಕ, ತಮಿಳುನಾಡು ಸೇರಿ ಹಲವು ರಾಜ್ಯಗಳಿಗೆ ಪರಿಹಾರ ಬಂದಿದೆ, ಸಿದ್ದರಾಮಯ್ಯಗೆ ಎರಡು ನಾಲಿಗೆ ಇವೆ, ಎರಡು ನಾಲಿಗೆಯಿಂದ ಸಿದ್ದರಾಮಯ್ಯ ಮಾತಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರೇ 4860 ಕೋಟಿ ಪರಿಹಾರ ಕೇಳಿದ್ದು ಅಂತ ಹೇಳಿದ್ದಾರೆ. ಕೇಂದ್ರ ಕೊಟ್ಟಿದ್ದು 3454 ಕೋಟಿ ರೂ. ಸಿದ್ದರಾಮಯ್ಯಗೆ ಎರಡು ನಾಲಿಗೆ ಇದೆಯೋ ಹತ್ತು ನಾಲಿಗೆ ಇದೆಯೋ? ಸಿಎಂ, ಡಿಸಿಎಂ ಇವರಿಬ್ಬರು ಬರೀ ಸುಳ್ಳು ಹೇಳುತ್ತಾರೆ. ಸುಳ್ಳುರಾಮಯ್ಯ, ಸುಳ್ಳುಕುಮಾರ್, ಬುರುಡೆ ಕುಮಾರ್, ಸಿದ್ದರಾಮಯ್ಯ ಯಾವ ನಾಲಿಗೆ ಇಟ್ಟುಕೊಂಡು ಮಾತಾಡ್ತಾರೆ? ಪ್ರತಿಭಟನೆ ಮಾಡ್ತಿದ್ದಾರಲ್ಲ ನಾಚಿಕೆ ಆಗಲ್ವಾ ಇವರಿಗೆ? ಎರಡು ನಾಲಿಗೆ ಸಿದ್ದರಾಮಯ್ಯರನ್ನು ಜನ ನಂಬಲ್ಲ. ಕಾಂಗ್ರೆಸ್ ಈ ರಾಜ್ಯದಿಂದ ತೊಲಗಬೇಕು, ಇಲ್ಲದಿದ್ದರೆ ರಾಜ್ಯಕ್ಕೆ ಉಳಿಗಾಲ ಇಲ್ಲ ಎಂದು ಅಶೋಕ್ ಹರಿಹಾಯ್ದರು.
ಹಿಂದಿನ ಯುಪಿಎ ಸರ್ಕಾರದ ದಾಖಲೆ ಬಿಡುಗಡೆ: ಕಾಂಗ್ರೆಸ್ನವರಿಗೆ ಮಾನ ಮರ್ಯಾದೆ ಇದ್ದರೆ ಸತ್ಯ ಹೇಳಲಿ ಎಂದು ಕೇಂದ್ರದ ಪರಿಹಾರ ಬಿಡುಗಡೆ ಸಂಬಂಧ ಅಂಕಿ ಅಂಶವನ್ನು ಅಶೋಕ್ ಬಿಡುಗಡೆ ಮಾಡಿದರು. 2004-05 ರಲ್ಲಿ ಬರಗಾಲ ಇದ್ದಾಗ ಕರ್ನಾಟಕ ಕೇಳಿದ್ದು 1147.70 ಕೋಟಿ ಆಗ ಯುಪಿಎ ಸರ್ಕಾರ ಕೊಟ್ಟಿದ್ದು 131 ಕೋಟಿ ರೂ. ಮಾತ್ರ, 10% ಮಾತ್ರ ಕೊಟ್ಟರು, 2005-06ರಲ್ಲಿ ಅತಿವೃಷ್ಟಿಗೆ 4297 ಕೋಟಿ ಕೇಳಲಾಗಿತ್ತು. ಯುಪಿಎ ಕೊಟ್ಟಿದ್ದು 358 ಕೋಟಿ ರೂ. ಮಾತ್ರ, 9.08% ಮಾತ್ರ ಕೊಡಲಾಗಿತ್ತು.
2006-07ರಲ್ಲಿ ಪ್ರವಾಹ/ಬರಗಾಲಕ್ಕೆ 2858 ಕೋಟಿ ಕೇಳಲಾಗಿತ್ತು. ಆದರೆ ಕೊಟ್ಟಿದ್ದು 226 ಕೋಟಿ ರೂ ಮಾತ್ರ ಅದು, 11.8% ರಷ್ಟಾಗಿತ್ತು, 2007-08ರಲ್ಲಿ ಜುಲೈನಲ್ಲಿ ಪ್ರವಾಹ ವೇಳೆ 406 ಕೋಟಿ ಕೇಳಿದರೆ ಕೊಟ್ಟಿದ್ದು ಶೂನ್ಯ. ಇದೇ ವರ್ಷದ ಆಗಸ್ಟ್ನಲ್ಲಿ 1510 ಕೋಟಿ ಕೇಳಿದರೆ, ಕೊಟ್ಟಿದ್ದು ಚಿಪ್ಪು, ಅದೇ ವರ್ಷದ ಅಕ್ಟೋಬರ್ ನಲ್ಲಿ 3941ಕೋಟಿ ರೂ. ಕೇಳಲಾಗಿತ್ತು, ಕೊಟ್ಟಿದ್ದು 178 ಕೋಟಿ, 4.5% ರಷ್ಟು ಮಾತ್ರ ಕೊಟ್ಟರು. 2008-09 ರಲ್ಲಿ ಬರಕ್ಕೆ 516 ಕೋಟಿ ರೂ. ಕೇಳಿದರೆ, ಕೊಟ್ಟಿದ್ದು ಕೇವಲ 1 ಕೋಟಿ ಇದು ಗಂಜಿಗೂ ಸಾಲೋದಿಲ್ಲ ಎಂದು ಅಶೋಕ್ ಟೀಕಿಸಿದರು.