ಮಂಡ್ಯ:ರೈತರ ಜೀವನಾಡಿ ಕೆಆರ್ಎಸ್ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗೆ ಆರು ತಿಂಗಳ ಬಳಿಕ ಕಾವೇರಿ ನೀರು ಹರಿಸಲಾಗಿದೆ. ನಾಲೆಯಲ್ಲಿ ನೀರು ಕಂಡು ರೈತರಲ್ಲಿ ಸಂತಸ ಮೂಡಿದೆ. ಕಳೆದ ಆರು ತಿಂಗಳಿಂದ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿಯನ್ನು 300 ಕೋಟಿ ರೂ. ಅನುದಾನದಲ್ಲಿ ನಡೆಸಲಾಗಿತ್ತು. ಕಾಮಗಾರಿ ಇನ್ನೂ ಬಾಕಿ ಉಳಿದಿದೆ. ವಿಶ್ವೇಶ್ವರಯ್ಯ ನಾಲೆ ವ್ಯಾಪ್ತಿಗೆ ಸೇರಿದ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಹಾಗೂ ಈ ಭಾಗದ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶದಿಂದ ಸರ್ಕಾರದ ಸೂಚನೆ ಮೇರೆಗೆ ನಾಲೆಗೆ ನೀರು ಬಿಡಲಾಗಿದೆ.
ಕೆಆರ್ಎಸ್ ಜಲಾಶಯದಿಂದ 1,600 ಕ್ಯೂಸೆಕ್ ನೀರು ಬಿಡಲಾಗುತ್ತದೆ. ಸುಮಾರು 15 ದಿನಗಳ ಕಾಲ ನಾಲೆಗೆ ನೀರು ಹರಿಸಲಾಗುತ್ತಿದೆ. ಬೆಳಿಗ್ಗೆ ಕೆಆರ್ಎಸ್ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನಿನ್ನೆ (ಗುರುವಾರ) ಮಧ್ಯಾಹ್ನದಿಂದ ತಾಲೂಕಿನ ಕಟ್ಟೇರಿ ಗ್ರಾಮದ ಸಮೀಪ ವಿಸಿ ನಾಲೆಗೆ ನೀರು ಹರಿದಿತ್ತು. ನಂತರ ಎಲೆಕೆರೆ ಹ್ಯಾಂಡ್ ಪೋಸ್ಟ್, ಪಾಂಡವಪುರ ಟೌನ್ಗೆ ಸಂಜೆ ವೇಳೆಗೆ ನಾಲೆ ನೀರು ತಲುಪಿತ್ತು. ಕಳೆದ ಆರು ತಿಂಗಳ ಹಿಂದೆ ಜನವರಿ ಕೊನೆ ವಾರದಲ್ಲಿ ವಿಸಿ ನಾಲೆ ಆಧುನೀಕರಣ ಕಾಮಗಾರಿ ಪ್ರಾರಂಭಿಸಲಾಗಿತ್ತು. ನಾಲಾ ಕಾಮಗಾರಿ ಭಾಗಶಃ ಮುಗಿಸಲಾಗಿದೆ.
ಇನ್ನೂ ಅನೇಕ ಭಾಗದಲ್ಲಿ ನಾಲಾ ಕಾಮಗಾರಿ ಅಪೂರ್ಣವಾಗಿದೆ. ಆದರೂ ನಾಲೆಗೆ ನೀರು ಹರಿಸಲಾಗಿದೆ. ವಿಸಿ ನಾಲೆಯಲ್ಲಿ ಕಳೆದ ಆರು ತಿಂಗಳು ನೀರಿಲ್ಲದೆ ರೈತರಿಗೆ ತೊಂದರೆ ಉಂಟಾಗಿತ್ತು. ಕನ್ನಂಬಾಡಿ ಕಟ್ಟೆನಲ್ಲೂ ನೀರಿಲ್ಲದೆ ತೀವ್ರ ಬರಗಾಲ ಉಂಟಾಗಿತ್ತು. ಬರಗಾಲ ಹಾಗೂ ನೀರಿಲ್ಲದೆ ರೈತರು ವ್ಯವಸಾಯ ಮಾಡುವುದನ್ನೇ ಬಿಟ್ಟಿದ್ದರು. ಆದರೆ, ಕೆಆರ್ಎಸ್ ಜಲಾಶಯದಲ್ಲಿ ನೂರರ ಗಡಿ ಪ್ರದೇಶ ನೀರು ತಲುಪಿದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ನಾಲಾ ಕಾಮಗಾರಿ ಆಗಿರುವುದರಿಂದ ಕೆಆರ್ಎಸ್ ಜಲಾಶಯದಿಂದ ಬುಧವಾರ ನಾಲೆಗೆ ನೀರು ಹರಿಸಲಾಗಿದೆ. ನಾಲೆಯಲ್ಲಿ ಕಾವೇರಿ ನೀರು ಹರಿಯುತ್ತಿದ್ದನ್ನು ರೈತರು ವೀಕ್ಷಿಸಿ, ಖುಷಿಪಟ್ಟಿದ್ದಾರೆ.