ಶಿವಮೊಗ್ಗದಲ್ಲಿ ಮಾರ್ಜಾಲಗಳ ಶೋ ಶಿವಮೊಗ್ಗ: ಬೆಕ್ಕುಗಳ ಆರೈಕೆ, ಆರೋಗ್ಯ ತಪಾಸಣೆ, ಬ್ರೀಡಿಂಗ್ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ನಗರದ ಸೆಕ್ರೆಟ್ ಹಾರ್ಟ್ ಚರ್ಚ್ ಆವರಣದ ಶಾಂತಿ ಸಮುದಾಯ ಭವನದಲ್ಲಿ ಗೇಟ್ ವೇ ಕ್ಯಾಟ್ ಕ್ಲಬ್ ವತಿಯಿಂದ ಭಾನುವಾರ ಕ್ಯಾಟ್ ಶೋ ನಡೆಯಿತು. ಈ ಶೋದಲ್ಲಿ ವಿವಿಧ ತಳಿಯ ಬೆಕ್ಕುಗಳು ಕಾಣಿಸಿಕೊಂಡವು.
ಬೆಕ್ಕು ಹಾಗೂ ನಾಯಿಗಳನ್ನು ಮನೆಯ ಒಬ್ಬ ಸದಸ್ಯನಂತೆಯೇ ಸಾಕಲಾಗುತ್ತದೆ. ಮನುಷ್ಯ ಹಾಗೂ ಸಾಕುಪ್ರಾಣಿಗಳ ನಡುವಿನ ಬಾಂಧವ್ಯವನ್ನೂ ಇವು ಗಟ್ಟಿಗೊಳಿಸುತ್ತವೆ. ನಾಯಿಗಳಂತೆ ಬೆಕ್ಕುಗಳಲ್ಲೂ ಅನೇಕ ತಳಿಗಳಿವೆ. ಅವುಗಳಲ್ಲಿ ಕೆಲವು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧಿ ಪಡೆದಿವೆ. ಲಕ್ಷ ಬೆಲೆ ಕೊಟ್ಟು ಬೆಕ್ಕುಗಳನ್ನು ಮಕ್ಕಳಂತೆ ಸಾಕುವವರಿದ್ದಾರೆ. ಅಂತಹ ಬೆಕ್ಕುಗಳು ಹಾಗೂ ಬೆಕ್ಕು ಪ್ರೇಮಿಗಳಿಗಾಗಿಯೇ ಕ್ಯಾಟ್ ಶೋ ಆಯೋಜಿಸಿತ್ತು.
ಶೋನಲ್ಲಿ ಡಾಲ್ ಫೇಸ್ ಹಾಗೂ ಸ್ಟ್ರೀಮ್ ಪಂಚ್ ಶಾರ್ಟ್ಗಳಂತಹ ಸ್ಥಳೀಯ ತಳಿಗಳು ಮಾತ್ರವಲ್ಲದೆ, ಮೈನೆ ಕೂನ್, ಬ್ರಿಟಿಷ್ ಶಾರ್ಟ್ ಹೇರ್, ಬೆಂಗಾಲ್, ಪರ್ಷಿಯನ್ ಬ್ರೀಡ್ಗಳಿದ್ದವು. ಇಲ್ಲಿ ಕೇವಲ ಕ್ಯಾಟ್‌ಗಳ ನಡುವೆ ಸ್ಪರ್ಧೆ ಮಾತ್ರವಲ್ಲದೇ ಬೆಕ್ಕುಗಳನ್ನು ಸಾಕುವುದು ಸೇರಿದಂತೆ ಆರೈಕೆ, ಬ್ರೀಡಿಂಗ್ ಸೇರಿ ಅನೇಕ ವಿಷಯಗಳ ಕುರಿತು ಟಿಪ್ಸ್ ನೀಡಲಾಯಿತು. ಉಚಿತ ಚುಚ್ಚುಮದ್ದು ನೀಡಲಾಯಿತು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಿಂದ ಕ್ಯಾಟ್ ಲವರ್ಸ್ ತಮ್ಮ ಬೆಕ್ಕುಗಳ ಜೊತೆ ಆಗಮಿಸಿದ್ದರು.
ಆಯೋಜಕ ಸೈಯದ್ ಜಬೀವುಲ್ಲಾ ಮಾತನಾಡಿ, "ಬೆಕ್ಕುಗಳ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅವುಗಳನ್ನು ಯಾವ ರೀತಿ ಸಾಕಬೇಕು ಎನ್ನುವುದು ತಿಳಿದಿರುವುದಿಲ್ಲ. ಬೆಕ್ಕುಗಳನ್ನು ಪ್ರೀತಿಯಿಂದ ಸಾಕುವುದರ ಜೊತೆಗೆ ಸರಿಯಾದ ಸಮಯಕ್ಕೆ ಅವುಗಳ ಆರೋಗ್ಯ ತಪಾಸಣೆ ಮಾಡುವುದೂ ಅಗತ್ಯ. ಸರಿಯಾದ ಸಮಯಕ್ಕೆ ಚುಚ್ಚುಮದ್ದು ನೀಡಬೇಕು. ಈ ಕುರಿತು ಬೆಕ್ಕು ಸಾಕುವವರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕ್ಯಾಟ್ ಶೋನಲ್ಲಿ ವೈದ್ಯರನ್ನು ಕರೆಯಿಸಿ ಮಾಹಿತಿ ಒದಗಿಸಲಾಗಿದೆ. ಅಲ್ಲದೆ ಬೆಕ್ಕುಗಳನ್ನು ದತ್ತು ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ನಮ್ಮ ಇಂದಿನ ಶೋಗೆ ಸಾರ್ವಜನಿಕರು ಸಹ ಸಾಕಷ್ಟು ಸಹಕಾರ ನೀಡಿದ್ದಾರೆ. ವಿವಿಧ ತಳಿಯ 150ಕ್ಕೂ ಹೆಚ್ಚು ಬೆಕ್ಕುಗಳು ಶೋನಲ್ಲಿ ಭಾಗವಹಿಸಿವೆ" ಎಂದು ತಿಳಿಸಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮುದಾಯ ಬೆಕ್ಕು ಜನನನಿಯಂತ್ರಣ ಕೇಂದ್ರ ಉದ್ಘಾಟನೆ