ಬೆಂಗಳೂರು: ರಾಜ್ಯದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಜಾತಿ ಸಮೀಕ್ಷೆಯ ಸಮಗ್ರ ವರದಿ ಇಂದು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಶಾಶ್ವತ ಹಿಂದುಳಿಗ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವ ಸಮಿತಿ ವಿಧಾನಸೌಧಕ್ಕೆ ವರದಿಯ ಪ್ರತಿ ಇರುವ ಬಾಕ್ಸ್ ಸಮೇತ ಆಗಮಿಸಿ ವರದಿ ಒಪ್ಪಿಸಿತು. ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವರದಿ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, "2014-15ರಲ್ಲಿ ಸರ್ಕಾರದ ಆದೇಶದ ಮೇರೆಗೆ ಆಯಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಿಕ್ಷಕರು, ಅಧಿಕಾರಿಗಳು ದತ್ತಾಂಶ ವರದಿ ತಯಾರಿಸಿದ್ದಾರೆ. ಈ ಹಿಂದೆ ಕಾಂತರಾಜ್ ಸಮಿತಿ ವರದಿ ಸಲ್ಲಿಕೆ ಮಾಡಬೇಕಿತ್ತು. ತಾಂತ್ರಿಕ ಕಾರಣದಿಂದ ಸಲ್ಲಿಕೆಯಾಗಲಿಲ್ಲ. ಇದೀಗ ನಾವು ವರದಿ ಸಲ್ಲಿಸಿದ್ದೇವೆ. ಇನ್ನು, ವರದಿ ಸೋರಿಕೆ ಆರೋಪ ಸುಳ್ಳು. ಇಡೀ ವರದಿ ಹೇಗೆ ಸೋರಿಕೆ ಆಗುತ್ತದೆ?, ಕೆಲ ಅಂಶಗಳು ಸೋರಿಕೆ ಆಗಿರಬಹುದು. ಕಾಂತರಾಜ ವರದಿಯಲ್ಲಿ ಬಿಟ್ಟ ಉಪಜಾತಿಗಳನ್ನು ಈ ವರದಿಯಲ್ಲಿ ಸೇರಿಸಲಾಗಿದೆ" ಎಂದರು.
"ಸರ್ಕಾರದ ಸೂಚನೆಯಂತೆ ಲಭ್ಯವಿರುವ ದತ್ತಾಂಶದ ಆಧಾರದಡಿ ವರದಿ ಸಿದ್ಧಪಡಿಸಲಾಗಿದೆ. ವೈಜ್ಞಾನಿಕವಾಗಿ ವರದಿ ತಯಾರು ಮಾಡಲಾಗಿದೆ. ವಿವಾದದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸರ್ಕಾರಕ್ಕೆ ವರದಿ ಸಲ್ಲಿಸುವುದು ನನ್ನ ಕೆಲಸ. ವರದಿ ಜಾರಿ ಬಗ್ಗೆ ನನಗೆ ಗೊತ್ತಿಲ್ಲ. ಅದು ಸರ್ಕಾರಕ್ಕೆ ಬಿಟ್ಟಿದ್ದು" ಎಂದು ತಿಳಿಸಿದರು.
ಲಭ್ಯವಿರುವ ಮಾಹಿತಿ ಪ್ರಕಾರ, ವರದಿಯು ಪ್ರತ್ಯೇಕವಾಗಿ ಒಟ್ಟು 13 ಪ್ರತಿಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015– ಸಮಗ್ರ ರಾಜ್ಯ ವರದಿ, ಜಾತಿವಾರು ಜನಸಂಖ್ಯಾ ವಿವರ–1 ಸಂಪುಟ, ಜಾತಿ ಹಾಗು ವರ್ಗಗಳ ಪ್ರಮುಖ ಲಕ್ಷಣಗಳು, (ಪ.ಜಾತಿ ಮತ್ತು ಪ.ಪಂಗಡಗಳನ್ನು ಹೊರತುಪಡಿಸಿ - 8 ಸಂಪುಟಗಳು, ಜಾತಿ ಹಾಗು ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿಗಳ)-1 ಸಂಪುಟ, ಜಾತಿ ಹಾಗು ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಪಂಗಡಗಳ) 1 ಸಂಪುಟ, ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ-ಅಂಶಗಳು (2 ಸಿಡಿಗಳು), ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024 ಒಳಗೊಂಡ ವರದಿಯನ್ನು ಸಿಎಂಗೆ ಸಲ್ಲಿಸಲಾಗಿದೆ.