ಹಾವೇರಿ:ವೈದ್ಯನ ನಿರ್ಲಕ್ಷ್ಯದಿಂದ ಗರ್ಭಕೋಶ ಕಳೆದುಕೊಂಡ ರಾಣೆಬೆನ್ನೂರು ತಾಲೂಕಿನ ಮಹಿಳೆಯರು ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುತ್ತಿಗೆ ಹಾಕಲು ಬಂದ ಮಹಿಳೆಯರನ್ನು ಪೊಲೀಸರು ಗೇಟ್ ಬಳಿ ತಡೆದರು. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆಯಿತು. ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆ ಒಳಗಾದ ಮಹಿಳೆಯರು ಸಚಿವ ಶಿವಾನಂದ ಪಾಟೀಲ ಭೇಟಿಗೆ ಅವಕಾಶ ನೀಡುವಂತೆ ಪಟ್ಟುಹಿಡಿದರು.
ಮಹಿಳೆಯರು ಕೈಯಲ್ಲಿ ಕಲ್ಲು ಹಿಡಿದು, ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಲು ಮುಂದಾದರು. ಅಷ್ಟೇ ಅಲ್ಲ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ನಮ್ಮನ್ನು ಬಂಧಿಸಿ, ಇಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಅನುಮತಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ನಮ್ಮನ್ನು ಮೈ ಕೈ ಮುಟ್ಟಿ ತಳ್ಳಾಡಿದ್ದಾರೆ. ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಆರೋಪಿಸಿದರು.