ಕರ್ನಾಟಕ

karnataka

ETV Bharat / state

ಜೆ.ಪಿ.ನಡ್ಡಾ ಮೇಲೆ ಎಸ್ಸಿ, ಎಸ್ಟಿ & ಮುಸ್ಲಿಮರ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ: ಸರ್ಕಾರಕ್ಕೆ ನೋಟಿಸ್ - JP Nadda Case - JP NADDA CASE

ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಮಾಳವಿಯಾ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್
ಹೈಕೋರ್ಟ್ (IANS)

By ETV Bharat Karnataka Team

Published : Jun 7, 2024, 8:32 PM IST

ಬೆಂಗಳೂರು:ಪರಿಶಿಷ್ಟ ಜಾತಿ, ಪಂಗಡ ಮತ್ತು ಮುಸ್ಲಿಂ ಸಮುದಾಯಗಳ ಕುರಿತಂತೆ ಅವಹೇಳನಾಕಾರಿ ಪೋಸ್ಟ್​ ಅನ್ನು ಬಿಜೆಪಿಯ ಎಕ್ಸ್ ಕಾರ್ಪ್ ಖಾತೆಯಲ್ಲಿ ಹಂಚಿಕೊಂಡ ಆರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಸಾಮಾಜಿಕ ಜಾಲತಾಣಗಳ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋಟ್ ನೋಟಿಸ್ ಜಾರಿ ಮಾಡಿದೆ.

ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಮಾಳವಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

'ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಆದರೂ, ಅರ್ಜಿದಾರರು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿದ್ದ ಎಂಬ ಕಾರಣಕ್ಕೆ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು' ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಕೋರಿದರು.

ಅಲ್ಲದೆ, ಅರ್ಜಿಯಲ್ಲಿ ಪ್ರತಿ ರಾಜ್ಯದ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಆರೋಪಗಳಿಗೆ ರಾಷ್ಟ್ರಾಧ್ಯಕ್ಷರ ಪಾತ್ರವಿದೆ ಎಂಬುದಾಗಿ ಅರ್ಥೈಸುವಂತಿಲ್ಲ. ಈ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಯಾವುದೇ ನಿರ್ದಿಷ್ಟವಾದ ಸಾಕ್ಷ್ಯಾಧಾರಗಳಿಲ್ಲ. ಅಲ್ಲದೆ, ಇದೇ ಆರೋಪದಲ್ಲಿ ಎರಡು ಪ್ರಕರಣಗಳು ಇವೆ. ಪಕ್ಷಕ್ಕೆ ರಾಷ್ಟ್ರಮಟ್ಟದಿಂದ ಸ್ಥಳೀಯ ಮಟ್ಟದವರೆಗೂ ವಿವಿಧ ಹಂತದಲ್ಲಿ ಮುಖ್ಯಸ್ಥರಿರಲಿದ್ದಾರೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿನ ದೈನಂದಿನ ಚಟುವಟಿಕೆಗಳಿಗೆ ಅರ್ಜಿದಾರರು ಕಾರಣ ಎಂದು ಭಾವಿಸಲಾಗುವುದಿಲ್ಲ. ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಇದೇ ಆರೋಪ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿಯೂ ಮತ್ತೊಂದು ಪ್ರಕರಣ ದಾಖಲಾಗಿದ್ದು, ಇದಕ್ಕೆ ಕಾನೂನಲ್ಲಿ ಅವಕಾಶವಿಲ್ಲ ಎಂದರು.

ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು ನೀಡಿದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಖಾಸಗಿ ದೂರು ದಾಖಲಾಗಿದ್ದು, ಅದಕ್ಕೆ ಕೌಟರ್ ಎಂಬಂತೆ ಈ ಪ್ರಕರಣ ದಾಖಲಿಸಲಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಅಂದರೆ 11 ಕೋಟಿ ಸದಸ್ಯರು ಹೊಂದಿರುವ ಪಕ್ಷ ಬಿಜೆಪಿ, ಭಾರತದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷ ಅಸ್ತಿತ್ವದಲ್ಲಿದೆ. ಪ್ರತಿಯೊಂದು ಸ್ಥಳೀಯ ಘಟಕ ಹೊಂದಿವೆ. ಅದೇ ರೀತಿ ಕರ್ನಾಟಕದಲ್ಲಿ ಹಲವು ವಿಭಾಗಗಳಿದ್ದು, ಒಂದು ಘಟಕ ಮಾಡಿದ ತಪ್ಪಿಗೆ ರಾಷ್ಟ್ರೀಯ ಅಧ್ಯಕ್ಷರನ್ನು ಆರೋಪಿಯನ್ನಾಗಿಸಲಾಗದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು? 2024 ಏಪ್ರಿಲ್ 4 ರಂದು ಬಿಜೆಪಿ ಕರ್ನಾಟಕದ ಸಾಮಾಜಿಕ ತಾಣ ಎಕ್ಸ್ ಜಾಲತಾಣದಲ್ಲಿ ಅನಿಮೇಷನ್ ಮಾದರಿಯ ವಿಡಿಯೋವೊಂದನ್ನು ಪೋಸ್ಟ್ ಆಗಿತ್ತು. ಅದರಲ್ಲಿ ಶಿರೋನಾಮೆಯನ್ನು ಎಚ್ಚರ.. ಎಚ್ಚರ.. ಎಚ್ಚರ ಎಂದು ಬರೆದಿದ್ದು, ಅದರಲ್ಲಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳನ್ನು ಮೂರು ಮೊಟ್ಟೆಗಳಿಂದ ಮರಿಗಳು ಹೊರ ಬರುತ್ತಿರುವಂತೆ ಗುರುತಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿದ್ದರಾಯ್ಯ ಮತ್ತೊಂದು ಧರ್ಮದ ಮೊಟ್ಟೆಯೊಂದನ್ನು ತಂದಿಟ್ಟು ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿದ್ದ ಆಹಾರವನ್ನು ನೀಡುತ್ತಿರುವಂತೆ ಬಿಂಬಿಸಲಾಗಿತ್ತು.

ಇದು ಚುನಾವಣೆ ಸಂದರ್ಭದಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆಯನ್ನು ಮೂಡಿಸುವ ಉದ್ದೇಶದಿಂದ ವಿಡಿಯೋ ಪೋಸ್ಟ್ ಮಾಡುವು ಮಾಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ. ಅಲ್ಲದೆ, ಒಂದು ಧಾರ್ಮಿಕ ಸಮುದಾಯದ ಮತಗಳನ್ನು ಪಡೆಯುವುದಕ್ಕಾಗಿ ಬಿಜೆಪಿ ಈ ರೀತಿಯ ವಿಡಿಯೋ ಬಳಕೆ ಮಾಡಿಕೊಂಡಿದೆ. ಅಲ್ಲದೆ, ಪರಿಶಿಷ್ಟ ಜಾತಿ ಸಮುದಾಯ ಮೊಟ್ಟೆಯಿಂದ ಹೊರಬಂದ ಮರಿಯನ್ನು ಮತ್ತೊಂದು ಸಮುದಾಯಕ್ಕೆ ಸೇರಿ ಮೊಟ್ಟಿಯಿಂದ ಹೊರ ಬಂದ ಮರಿ ಕಾಲಿನಿಂದ ಒದೆಯುವಂತೆ ತೋರಿಸಲಾಗಿದ್ದು, ಆ ಮೂಲಕ ಎಸ್ಸಿ ಸಮುದಾಯವನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಆರೋಪಿಸಿ 2024ರ ಮೇ 5 ರಂದು ಕಾಂಗ್ರೆಸ್ ಕಾನೂನು ವಿಭಾಗದ ಮುಖ್ಯಸ್ಥ ರಮೇಶ್ ಬಾಬು ದೂರು ದಾಖಲಿಸಿದ್ದರು. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಅಮಿತ್ ಮಾಳವಿಯಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ರದ್ದುಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾಗಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ - PM Modi Meets President Murmu

ABOUT THE AUTHOR

...view details