ವಿಜಯಪುರ:ಕಾರು ಮತ್ತು ತೊಗರಿ ಕಟಾವು ಮಷಿನ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಐವರು ಮೃತಪಟ್ಟ ಘಟನೆ ಇಂದು ಸಂಜೆ ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ನಡೆಯಿತು.
ತಾಳಿಕೋಟೆಯಿಂದ ಹುಣಸಗಿಗೆ ತೆರಳುತ್ತಿದ್ದ ತೊಗರಿ ಕಟಾವು ಮಾಡುವ ಯಂತ್ರ ಹಾಗೂ ಹುಣಸಗಿ ಪಟ್ಟಣದಿಂದ ತಾಳಿಕೋಟೆಯತ್ತ ಆಗಮಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.
ನಿಂಗಪ್ಪಾ ಕರಿಗೌಡ ಪಾಟೀಲ್ (55), ಶಾಂತವ್ವ ಶಂಕರ ಪಾಟೀಲ್ (45), ಭೀಮೇಶಿ ಕಲ್ಲನಗೌಡ ಸಂಕನಾಳ (65), ಶಶಿಕಲಾ ರಾಮಪ್ಪ ಜೈನಪುರ (45) ಹಾಗು ದಿಲೀಪ್ ಕರಿಗೌಡ ಪಾಟೀಲ್ (50) ಮೃತರೆಂದು ಗುರುತಿಸಲಾಗಿದೆ.
ಕನ್ಯೆ ನೋಡಿ ವಾಪಸ್ ಬರುತ್ತಿದ್ದರು: ಯಾದಗಿರಿ ಜಿಲ್ಲೆಯ ಅಗ್ನಿ ಗ್ರಾಮದಲ್ಲಿ ಕನ್ಯೆ ನೋಡಿ ವಾಪಸ್ ಬರುತ್ತಿದ್ದಾಗ ಕ್ರೂಸರ್ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಕಟಾವು ಮಷಿನ್ಗೆ ಕಾರು ಮುಖಾಮುಖಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ತಾಳಿಕೋಟೆ ಪೊಲೀಸರು ಸ್ಥಳಕ್ಕಾಗಮಿಸಿ ಜೆಸಿಬಿ ಮೂಲಕ ಕಾರಿನಲ್ಲಿದ್ದ ಶವಗಳನ್ನು ಹೊರತೆಗೆದರು. ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಸನಬಾಗೇವಾಡಿ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯಕ್ಷದರ್ಶಿ ಮೊಹಮ್ಮದ್ ಗೌಸ್ ಅವರು ಮಾತನಾಡಿದರು (ETV Bharat) ಪ್ರತ್ಯಕ್ಷದರ್ಶಿ ಮೊಹಮ್ಮದ್ ಗೌಸ್ ಎಂಬವರು ಮಾತನಾಡಿ, ''ನಾನು ನನ್ನ ಸ್ನೇಹಿತ 4 ಗಂಟೆಗೆ ಹುಣಸಗಿಗೆ ಹೋಗುತ್ತಿದ್ದೆವು. ನಮ್ಮನ್ನು ಓವರ್ಟೇಕ್ ಮಾಡಿ ಕಾರು ಮುಂದೆ ಹೋಯಿತು. ನಂತರ ಮಷಿನ್ಗೆ ಮುಖಾಮುಖಿ ಡಿಕ್ಕಿಯಾಯಿತು. ನಾವು ಅಲ್ಲಿಗೆ ಹೋಗುವಾಗ ಎಲ್ಲರೂ ಮೃತಪಟ್ಟಿದ್ದರು. ಪಿಎಸ್ಐಗೆ ಮಾಹಿತಿ ನೀಡಿದ್ವಿ. ಐದು ನಿಮಿಷದಲ್ಲಿ ಅವರು ಬಂದು ಪರಿಶೀಲನೆ ನಡೆಸಿದರು'' ಎಂದರು.
ಇದನ್ನೂ ಓದಿ:ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ವೃದ್ಧ ಗಂಭೀರ, ಹಲವು ವಾಹನಗಳು ಜಖಂ