ಬೆಂಗಳೂರು: "ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆಗುವುದಿಲ್ಲ. ಈ ಕುರಿತು ಚರ್ಚಿಸಲು ಜುಲೈ 14ಕ್ಕೆ ಸರ್ವ ಪಕ್ಷ ಸಭೆ ಕರೆಯಲು ತೀರ್ಮಾನಿಸಿದ್ದೇವೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನದಿ ನೀರು ಬಿಡುಗಡೆ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಹೆಚ್.ಮುನಿಯಪ್ಪ, ಡಾ. ಹೆಚ್.ಸಿ. ಮಹದೇವಪ್ಪ, ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಗುರುವಾರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡಲು ಶಿಫಾರಸು ಮಾಡಿದೆ. ಸಭೆಯಲ್ಲಿ ನಮ್ಮ ರಾಜ್ಯದ ಅಧಿಕಾರಿಗಳು ಭಾಗವಹಿಸಿದ್ದರು. ಸಹಜ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಜಲಾಶಯಗಳಲ್ಲಿ ಈವರೆಗೆ ಶೇ 28ರಷ್ಟು ನೀರಿನ ಕೊರತೆ ಇದೆ. ಸಿಡಬ್ಲ್ಯುಆರ್ಸಿ ಮುಂದೆ ಸ್ಪಷ್ಟವಾಗಿ ನಮ್ಮ ರಾಜ್ಯದ ನಿಲುವನ್ನು ಹೇಳಿದ್ದೇವೆ. ಜೊತೆಗೆ ಯಾವುದೇ ತೀರ್ಮಾನ ಮಾಡಕೂಡದು ಎಂದು ಮನವಿ ಮಾಡಿದ್ದೆವು. ಜುಲೈ ಅಂತ್ಯದವರೆಗೆ ಕಾದು ನೋಡಿ ಎಂದು ಮನವಿ ಮಾಡಿದ್ದೆವು. ಆದರೂ ಕಾವೇರಿ ನಿಯಂತ್ರಣ ಸಮಿತಿಯವರು ಜುಲೈ 12 ರಿಂದ ನಿತ್ಯ 1 ಟಿಎಂಸಿ ನೀರು ಬಿಡಲು ಹೇಳಿದ್ದಾರೆ" ಎಂದು ತಿಳಿಸಿದರು.
ಸಿಡಬ್ಲ್ಯುಎಂಎ ಮುಂದೆ ಮೆಲ್ಮನವಿಗೆ ತೀರ್ಮಾನ: "ಈ ಶಿಫಾರಸಿನ ವಿರುದ್ಧವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನ ಮಾಡಿದ್ದೇವೆ. ನೀರು ಬಿಡಲು ಆಗುವುದಿಲ್ಲ ಎಂದು ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ. ಜೊತೆಗೆ ಸರ್ವ ಪಕ್ಷ ಸಭೆ ನಡೆಸಲು ತೀರ್ಮಾನ. ಜುಲೈ 14 ರಂದು ಸಂಜೆ 4 ಗಂಟೆಗೆ ಸಭೆ ಮಾಡಲು ತೀರ್ಮಾನಿಸಿದ್ದೇವೆ" ಎಂದರು.
"ಕಾವೇರಿ ಜಲಾನಯನ ಪ್ರದೇಶದ ಎಲ್ಲ 4 ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎಂಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನಾವು ನೀರು ಒದಗಿಸಬೇಕಾಗಿದೆ. ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ. ಮಳೆ ಕೊರತೆ ಗಮನದಲ್ಲಿರಿಸಿ ಜುಲೈ ಅಂತ್ಯದವರೆಗೆ ಕಾಯಲು ಮನವಿ ಮಾಡಿದ್ದೇವೆ. ಮಳೆ, ನೀರು, ಕೊರತೆ, ಕೃಷಿಗೆ ನೀರು ಕೊಡಬೇಕಾಗಿರುವುದರಿಂದ ಎಲ್ಲ ಕಾರಣಗಳಿಗೆ ನೀರು ಕೊಡಲು ಆಗುವುದಿಲ್ಲ ಎಂದಿದ್ದೇವೆ" ಎಂದು ತಿಳಿಸಿದರು.