ಬೆಂಗಳೂರು :ರಾಜ್ಯಾದ್ಯಂತ ಭಾನುವಾರ ನಡೆಸಲಾದ ಕೆಎಎಸ್ ಶ್ರೇಣಿಯ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳು ಕಂಡು ಬಂದಿದ್ದು, ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ಪ್ರಮಾದವಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಇಂದು ಕರ್ನಾಟಕ ಲೋಕಸೇವಾ ಆಯೋಗದಿಂದ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ, ಕೆಪಿಎಸ್‌ಸಿ ವತಿಯಿಂದ ಸಿದ್ಧಪಡಿಸಲಾದ ಕೆಎಎಸ್ ಪತ್ರಿಕೆಯಲ್ಲಿ ಪ್ರಮಾದಗಳು ಕಂಡುಬಂದಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ಈಗಾಗಲೇ ಈ ಹಿಂದೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳ ಭಾಷಾಂತರದಲ್ಲಿ ತಪ್ಪು, ವಾಸ್ತವಾಂಶಗಳ ತಪ್ಪುಗಳಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ಅನ್ಯಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗಿತ್ತು. ಇದೀಗ 2ನೇ ಬಾರಿಗೆ ನಡೆಸಲಾದ ಮರು ಪರೀಕ್ಷೆಯಲ್ಲಿಯೂ ಮತ್ತೆ ದೋಷಗಳು ಕಂಡುಬಂದಿವೆ.
ಆರೋಪದ ಹಿನ್ನೆಲೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದು ಮರುಪರೀಕ್ಷೆಯನ್ನು ನಡೆಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಉಂಟಾದ ಲೋಪದಿಂದ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮತ್ತೊಮ್ಮೆ ಮರು ಪರೀಕ್ಷೆಯನ್ನು ನಡೆಸಬೇಕು ಎಂದು ನಾಗಣ್ಣ ಎನ್ನುವ ಅಭ್ಯರ್ಥಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕೆಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ 3 ರಿಂದ 5 ಪ್ರಶ್ನೆಗಳ ಕನ್ನಡ ಅನುವಾದ ಮಾಡುವಲ್ಲಿ ಲೋಪವಾಗಿದೆ. ಈ ಹಿಂದೆ ಆಗಸ್ಟ್ 27ರಂದು ನಡೆದಿದ್ದ ಇದೇ ಪರೀಕ್ಷೆಯಲ್ಲಿ ಕನ್ನಡ ಲೋಪದೋಷವಾಗಿ ಪರೀಕ್ಷೆ ರದ್ದಾಗಿತ್ತು. ಇವತ್ತು ಬೆಳಗ್ಗೆ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ ನಡೆದಿತ್ತು. ಪೇಪರ್ 1 ಸಾಮಾನ್ಯ ಜ್ಞಾನ 1-ಬಿ ಸಿರೀಸ್ನ ಪ್ರಶ್ನೆ ಪತ್ರಿಕೆಯಲ್ಲಿ ಲೋಪವಾಗಿದೆ.
ಪ್ರಶ್ನೆ 3ರಲ್ಲಿ ತಪ್ಪದ ಪದ ಬಳಕೆ - ಅದು ತಪ್ಪಾದ ಆಗಬೇಕಿತ್ತು. ಪ್ರಶ್ನೆ 45 ರಲ್ಲಿ ವಿಧೇಯತ - ವಿಧೇಯಕ ಆಗಬೇಕಿತ್ತು. ಪ್ರಶ್ನೆ 97ರಲ್ಲಿ ಸ್ವಾಯಿಕ ಪುನರಂ- ಪುನರ್ ಪರಿಶೀಲನೆ ಆಗಬೇಕಿತ್ತು. ಪ್ರಶ್ನೆ 85 ರಲ್ಲಿ ಅಮೆರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದರೆ ಭಾರತದ ರಾಷ್ಟ್ರಪತಿಯವರು ಸಂಸತ್ತಿನಿಂದ ಬಾಕಿ ಇರುವ ಮಸೂದೆಯನ್ನ ಇತ್ಯರ್ಥವಾಗದ ಅನಿರ್ಧಿಷ್ಟ ಕಾಲದವರೆಗೆ ಹಿಡಿದುಕೊಳ್ಳಬಹುದು- ಅನುವಾದ ತಪ್ಪಾಗಿದೆ. ಈ ಪ್ರಶ್ನೆಯಲ್ಲಿ ಅಮೆರಿಕಾದಲ್ಲಿ ರಾಷ್ಟ್ರಪತಿ ಇರದೆ ರಾಷ್ಟ್ರಾಧ್ಯಕ್ಷ ಇರುತ್ತಾರೆ, ಇದು ತಪ್ಪಾಗಿರುವ ಅಂಶವಾಗಿದೆ.