ಬೆಂಗಳೂರು :ಸಾರ್ವಜನಿಕ ಆಸ್ತಿ ನಗದೀಕರಣಕ್ಕೆ ಅನುವು ಮಾಡಿಕೊಡುವ ರಾಜ್ಯ ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಕಾರ್ಯನೀತಿ 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸುಸ್ಥಿರ ಅಭಿವೃದ್ಧಿಯೊಂದಿಗೆ ಹೆಚ್ಚಿನ ಬೆಳವಣಿಗೆ ಮತ್ತು ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ವಿಸ್ತರಿಸಿ, ಅಭಿವೃದ್ಧಿಪಡಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮಾದರಿಯಾಗಿ ಸ್ಥಾಪಿಸುವ ಉದ್ದೇಶದೊಂದಿಗೆ ಈ ಪಿಪಿಪಿ ಕಾರ್ಯನೀತಿಯನ್ನು ಜಾರಿಗೆ ತರಲಾಗುತ್ತಿದೆ. ಈ ನೀತಿಯಲ್ಲಿ ವಿವಿಧ ವಲಯಗಳ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲಾಗುತ್ತದೆ.
ಆಸ್ತಿ ನಗದೀಕರಣ ಅಂಶ ಸೇರ್ಪಡೆ:ಪಿಪಿಪಿ ಕಾರ್ಯನೀತಿಯಲ್ಲಿ ಆಸ್ತಿ ನಗದೀಕರಣವನ್ನೂ ಸೇರಿಸಲಾಗಿದೆ. ಪ್ರಸಕ್ತ ಪಿಪಿಪಿ ಮಾದರಿ ಕೆಲ ಅಭಿವೃದ್ಧಿ ಕೆಲಸಗಳ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಮಾತ್ರ ಸೀಮಿತವಾಗಿದೆ. ಹೊಸ ಸಂಪನ್ಮೂಲ ಕ್ರೋಢೀಕರಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಪಿಪಿಪಿ ಕಾರ್ಯನೀತಿ ರೂಪಿಸಲಾಗಿದೆ. ಆಸ್ತಿ ನಗದೀಕರಣ ಖಾಸಗಿ ವಲಯದಲ್ಲಿನ ಪರಿಣತಿ ಹಾಗೂ ತಂತ್ರಜ್ಞಾನವನ್ನು ಬಳಕೆ ಮಾಡಲು ಅನುಕೂಲವಾಗಲಿದೆ. ಈಗಾಗಲೇ ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗಾಗಿ ಪಿಪಿಪಿ ಮೂಲಕ ಆಸ್ತಿ ನಗದೀಕರಣದ ಮೊರೆ ಹೋಗಲು ತೀರ್ಮಾನಿಸಿದೆ. ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಕೊರತೆ ಎದುರಿಸುತ್ತಿರುವ ಸರ್ಕಾರ ಇದೀಗ ಪಿಪಿಪಿ ಮೂಲಕ ಸರ್ಕಾರಿ ಆಸ್ತಿಗಳ ನಗದೀಕರಣದ ಮೂಲಕ ಮೂಲಸೌಕರ್ಯ ಅಭಿವೃದ್ಧಿ ಮಾಡಲು ತೀರ್ಮಾನಿಸಿದೆ.