ಬೆಂಗಳೂರು:ಅಧಿಕ ಹಣ ಪಾವತಿಸುವಂತೆ ಒತ್ತಾಯಿಸಿ ಕ್ಯಾಬ್ ಚಾಲಕನೋರ್ವ ಗ್ರಾಹಕನನ್ನು ಅವಾಚ್ಯವಾಗಿ ನಿಂದಿಸಿ ನಡು ರಸ್ತೆಯಲ್ಲಿ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ ಪದ್ಮನಾಭನಗರದ ಆರ್. ಕೆ. ಲೇಔಟ್ನಲ್ಲಿ ಘಟನೆ ನಡೆದಿದ್ದು, ಕ್ಯಾಬ್ ಚಾಲಕ ಕಾಂತರಾಜು ಎಂಬಾತನ ದುರ್ವರ್ತನೆಯಿಂದ ಬೇಸತ್ತ ಗ್ರಾಹಕ ಶುಭಂ ಎಕ್ಸ್ ಆ್ಯಪ್ನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶನಿವಾರ ಬೆಳಗ್ಗೆ ತಮ್ಮ ಸಂಬಂಧಿಯೊಬ್ಬರಿಗಾಗಿ ಆರ್. ಕೆ. ಲೇಔಟ್‌ನಿಂದ ಶುಭಂ ಅವರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಡ್ರಾಪ್ ಮುಗಿದ ಬಳಿಕ 'ನಿಗದಿತ ಅಂತರಕ್ಕಿಂತಲೂ 3 ಕಿಲೋಮೀಟರ್ ಹೆಚ್ಚುವರಿಯಾಗಿದೆ, ಆದ್ದರಿಂದ ಹೆಚ್ಚು ಹಣ ಕೊಡಿ' ಎಂದು ಕೇಳಿದ್ದಾನೆ. ಇದಕ್ಕೆ ನಿರಾಕರಿಸಿದ ಶುಭಂ, 'ಆ್ಯಪ್‌ನ ಪ್ರಕಾರ ನಾನು ಹಣ ಪಾವತಿಸುತ್ತೇನೆ, ಅಧಿಕ ಹಣ ಪಾವತಿಸಲು ಸಾಧ್ಯವಿಲ್ಲ. ಬೇಕಿದ್ದರೆ ನೀವು ಓಲಾದವರ ಬಳಿ ದೂರು ನೀಡಿ' ಎಂದಿದ್ದಾರೆ.
ಗ್ರಾಹಕನಿಂದ ವಿಡಿಯೋ ಸಹಿತ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ (ETV Bharat) ಇದೇ ವಿಚಾರಕ್ಕೆ ಕೆಲಕಾಲ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಎಷ್ಟು ದರವಿದೆ ತೋರಿಸಿ ಎಂದ ಶುಭಂ ಚಾಲಕನ ಮೊಬೈಲ್ ಮುಟ್ಟಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಕೋಪಗೊಂಡ ಚಾಲಕ ಕಾಂತರಾಜು, ಕ್ಯಾಬ್‌ನಿಂದ ಇಳಿದು ಶುಭಂ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿ ಸ್ಥಳದಿಂದ ಕಳಿಸಿದ್ದಾರೆ. ಘಟನೆಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಶುಭ ಎಕ್ಸ್ ಆ್ಯಪ್‌ನ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
"ಕ್ಯಾಬ್ ಚಾಲಕ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ನಾವು ನಿರಾಕರಿಸಿದಾಗ ನಮ್ಮ ಸಂಬಂಧಿ ಮಹಿಳೆಯನ್ನು ತಳ್ಳಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅದಕ್ಕೆ ನಾನು ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳಿ ಎಂದಾಗ ನನಗೂ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ನಾನು ಚಿತ್ರೀಕರಿಸಿಕೊಂಡಿದ್ದ ಕೆಲ ವಿಡಿಯೋಗಳನ್ನು ಡಿಲಿಟ್ ಮಾಡಿಸಲಾಗಿದೆ. ಸ್ಥಳೀಯರ ನೆರವಿನ ನಂತರ ನಾವು ಮನೆಗೆ ಬಂದೆವು. ಈ ಘಟನೆಯಿಂದ ನಮಗೆ ಭಯವಾಗಿದೆ" ಎಂದು ಶುಭಂ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಿ.ಟಿ.ರವಿ ಆರೋಪ ಮಾಡುವುದರಲ್ಲಿ, ಮಾತು ತಿರುಚುವುದರಲ್ಲಿ ಎಕ್ಸ್ಪರ್ಟ್: ಡಿ.ಕೆ.ಸುರೇಶ್