ಬೆಂಗಳೂರು: ನಾನು ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಆಸೆ ಇಟ್ಕೊಂಡಿಲ್ಲ, ಆಸೆಯೇ ದು:ಖಕ್ಕೆ ಮೂಲ, ಟಿಕೆಟ್ ಕೊಟ್ಟರೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ, ಇಲ್ಲದಿದ್ದರೆ ಪಕ್ಷದ ಕೆಲಸ ಮಾಡುತ್ತೇನೆ. ನಾನು ಸ್ಪರ್ಧೆ ಮಾಡಬೇಕೋ ಬೇಡವೋ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಮಾಜಿ ಸಚಿವ ಹಾಗು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಿ ಟಿ ರವಿ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಕಾರ್ಯಕರ್ತ, ನನ್ನ ಯೋಗಕ್ಷೇಮ ನೋಡುವುದು ಪಾರ್ಟಿ ಕೆಲಸ. ನಾನು ಎಲ್ಲೂ ಲೋಕಸಭಾ ಚುನಾವಣೆ ಟಿಕೆಟ್ ಕೇಳಿಲ್ಲ, ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದಾನೆ. ಹೀಗಾಗಿ ಕೊಟ್ಟರೆ ಉಂಟು ಕೊಡದಿದ್ದರೆ ಇಲ್ಲ, ಈ ಬಾರಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನಾನು ಇದ್ದೇನೋ, ಇಲ್ಲವೋ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ತಿಳಿಸಿದರು.
ನಾವು ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. 28 ಕ್ಷೇತ್ರಗಳಿಗೂ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿ ಕಳಿಸಿದ್ದೇವೆ. ಇವತ್ತು ದೆಹಲಿಯಲ್ಲಿ ಪ್ರಾಥಮಿಕ ಹಂತದ ಸಭೆ ಇದೆ. ಇದೇ 8 ಅಥವಾ 9 ರಂದು ಸಿಇಸಿ ಸಭೆ ನಡೆಸುತ್ತಾರೆ. ಕರ್ನಾಟಕದ ಪಟ್ಟಿಯನ್ನು ಹೈಕಮಾಂಡ್ ನಾಯಕರು ಘೋಷಣೆ ಮಾಡುತ್ತಾರೆ ಎಂದರು.
ಮೈತ್ರಿ ಸೀಟು ಹಂಚಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಜೆಡಿಎಸ್ ಜತೆ ನಮ್ಮ ಮೈತ್ರಿ ಆಗಿರುವುದು ಸ್ಪಷ್ಟ. ಜೆಡಿಎಸ್ ಈಗ ಎನ್‌ಡಿಎ ಭಾಗವಾಗಿದೆ. ಹಾಗಾಗಿ ಎನ್‌ಡಿಎ ಸಭೆಯಲ್ಲಿ ಟಿಕೆಟ್ ನಿರ್ಧಾರ ಮಾಡಲಾಗುತ್ತದೆ. ಯಾವ ಸೀಟು ಬಿಜೆಪಿಗೆ ಕೊಡಬೇಕು, ಯಾವ ಸೀಟು ಜೆಡಿಎಸ್‌ಗೆ ಕೊಡಬೇಕು ಎಂಬುದು ನಿರ್ಧಾರವಾಗಲಿದ್ದು, ಎರಡೂ ಪಕ್ಷಗಳ ನಾಯಕರು ಪರಸ್ಪರ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಕಳೆದ ಬಾರಿ 146 ಕ್ಷೇತ್ರಗಳಲ್ಲಿ ನಾವು ಎರಡನೇ ಸ್ಥಾನ ಪಡೆದಿದ್ದೆವು. ನಾವು ಸುಮ್ಮನೆ ಕುಳಿತಿಲ್ಲ. ಅಲ್ಲಿಯೂ ಗೆಲ್ಲಲು ಹೋಮ್ ವರ್ಕ್ ಮಾಡಿದ್ದೇವೆ. ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸರ್ವೆ ಮಾಡಿದ್ದೇವೆ. ಆಕಾಂಕ್ಷಿಗಳ ಹೆಸರು ಪಟ್ಟಿ ಮಾಡಿ ಶಾರ್ಟ್ ನೋಟ್ ಮಡಲಾಗಿದೆ. ಇಂದು ಪ್ರಿಲಿಮನರಿ ಸಭೆ ಕೂಡ ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಕೂಡ ಬಿಡುಗಡೆ ಆಗಲಿದೆ. ನಮ್ಮ ಗುರಿ ಮೋದಿ ಮತ್ತೊಮ್ಮೆ ಅದಕ್ಕೆ ಎಲ್ಲಾ ರೀತಿಯ ತಯಾರಿ ಆಗಿದೆ. ಜಾಗೋ ಲಂಬಾಣಿ, ದಲಿತ ವರ್ಗಗಳ ಸಭೆ ನಡೆದಿದೆ. ಎಲ್ಲಾ ಕ್ಷೇತ್ರ ಗೆಲ್ಲುವ ಯೋಜನೆ ರೂಪಿಸಲಿದ್ದೇವೆ ಎಂದು ಹೇಳಿದರು.
ಬಳಿಕ ಡಿಎಂಕೆ ನಾಯಕ ಹೇಳಿಕೆಗೆ ಪ್ರತಿಕ್ರಿಯಿಸಿ, ತಮಿಳುನಾಡಿನಲ್ಲಿ ಅಭದ್ರತೆ ಕಾಡುತ್ತಿದೆ. ಡಿಎಂಕೆ ನಾಯಕ ಇದು ಭಾರತವೇ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಾಷ್ಟ್ರದ ಬಗ್ಗೆ ಅಸಂಬದ್ಧ ಹೇಳಿಕೆ ಕೊಡೋದು ಇವರ ಜೀನ್ಸಲ್ಲೇ ಬಂದಿದೆ. ತಮಿಳುನಾಡಿನಲ್ಲಿ ಅಣ್ಣಾಮಲೈ ಗಾಳಿ ಬೀಸುತ್ತಿದೆ. ಹೀಗಾಗಿ ಡಿಎಂಕೆ ಹೆದರಿದೆ. ಡಿಎಂಕೆ ಅಂದರೆ ಡೆಂಗ್ಯೂ, ಮಲೇರಿಯಾ, ಕಾಲರ ರೋಗದ ರೀತಿ. ತಮಿಳುನಾಡು ಜನರೇ ಇವರ ಕಾಯಿಲೆ ವಾಸಿ ಮಾಡಬೇಕು. ಅವರ ರೋಗಕ್ಕೆ ಜನರೇ ಮದ್ದು ಅರಿಯಬೇಕು ಎಂದು ಚಾಟಿ ಬೀಸಿದರು.
ಇದನ್ನೂ ಓದಿ:ಸೋಮಶೇಖರ್, ಹೆಬ್ಬಾರ್ ಮಾತ್ರವಲ್ಲದೆ ಹಲವರು ಕಾಂಗ್ರೆಸ್ಗೆ?: ಡಿಕೆಶಿ ಹೇಳಿದ್ದೇನು?