ಕೊಪ್ಪಳ:ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೇ ಒಂದು ರೂಪಾಯಿ ಕೂಡ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕೊಪ್ಪಳದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರ ಇದೆ. ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಕೊಡೋದಾಗಿ ಹೇಳಿತ್ತು. ಅದು ಬಿಡುಗಡೆಯಾಗಿ ನಮ್ಮ ಕ್ಷೇತ್ರಕ್ಕೆ ಬರಲು ಇನ್ನೂ ಎಷ್ಟು ತಿಂಗಳು ತಗಲುತ್ತೋ ಗೊತ್ತಿಲ್ಲ. ಪ್ರತಿ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಆಗದೇ ಓಡಾಡಲು ಆಗದಂತಹ ಸ್ಥಿತಿ ಇದೆ. ನಾಡಿನ ಜನ ಭ್ರಷ್ಟ ಕಾಂಗ್ರೆಸ್ಗೆ ಹಿಡಿಶಾಪ ಹಾಕ್ತಿದ್ದಾರೆ ಎಂದರು.
ಸ್ವ-ಪಕ್ಷದ ಶಾಸಕ ರಮೇಶ್ ಜಾರಕಿಹೊಳಿ ಮಾತಿಗೆ ಪ್ರತಿಕ್ರಿಯಿಸಿದ ಅವರು, ಜಾರಕಿಹೊಳಿ ಅವರು ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಹಳ್ಳಿ ಹಳ್ಳಿ ತಿರುಗಿ ಪಕ್ಷ ಕಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಇದೀಗ ಪಕ್ಷಕ್ಕೆ ಬಂದಿದ್ದಾರೆ. ಅವರು ಬಾಯಿಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಅವರಿಗೆ ಪಕ್ಷದಲ್ಲಿ ಏನಾದರೂ ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಲಿ. ಅದನ್ನ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಯಾರ ವೈಫಲ್ಯ ಇದೇ ಎನ್ನುವುದನ್ನ ಅವರ ಕ್ಷೇತ್ರದ ಜನರನ್ನು ಕೇಳಿದರೆ ಹೇಳುತ್ತಾರೆ. ಹಾಗಾಗಿ ರಮೇಶ್ ಜಾರಕಿಹೊಳಿ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವು ಸರಿಹೋಗಲಿದೆ ಎಂದರು.