ಬೆಂಗಳೂರು:ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳ ನಡುವೆ ಯಾವುದೇ ಗೊಂದಲವಿಲ್ಲ. ಮೈತ್ರಿ ಸುಸೂತ್ರವಾಗಿ ನಡೆಯಲಿದೆ. ಜೆಡಿಎಸ್ ನಾಯಕರಿಗೆ ಸಮಾಧಾನವಾಗುವಂತಹ ನಿರ್ಧಾರವನ್ನೇ ಬಿಜೆಪಿ ವರಿಷ್ಠರು ತೆಗೆದುಕೊಳ್ಳಲಿದ್ದು ಸಣ್ಣಪುಟ್ಟ ಗೊಂದಲಗಳು ಸುಖಾಂತ್ಯ ಕಾಣಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.
ಡಾಲರ್ಸ್ ಕಾಲೊನಿಯಲ್ಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟು ಹಂಚಿಕೆ ವಿಚಾರ ಸಂಬಂಧ ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಗೊಂದಲವಿಲ್ಲ. ಮೈತ್ರಿ ಪಕ್ಷಗಳೆಂದಾಗ ಸಣ್ಣಪುಟ್ಟ ಗೊಂದಲಗಳು ಸಹಜ. ನಿನ್ನೆ ನಮ್ಮ ರಾಷ್ಟ್ರೀಯ ನಾಯಕರೊಂದಿಗೆ ದೂರವಾಣಿ ಮೂಲಕ ಎಲ್ಲ ವಿಚಾರಗಳ ಕುರಿತು ಚರ್ಚಿಸಿದ್ದೇನೆ. ನಂತರ ನಮ್ಮ ವರಿಷ್ಠರು ನೀಡಿದ ಸಂದೇಶದೊಂದಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಜೊತೆಯಲ್ಲಿಯೂ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ನಂತರ ಕುಮಾರಸ್ವಾಮಿ ಜೊತೆಗೂ ದೂರವಾಣಿ ಮೂಲಕ ಇಂದು ಬೆಳಗ್ಗೆ ಮಾತನಾಡಿ, ಮಾಹಿತಿ ನೀಡಿದ್ದೇನೆ. ಎಲ್ಲ ಒಟ್ಟಾರೆಯಾಗಿ ಚರ್ಚೆಯಾಗಿ ಸರಿ ಹೋಗಲಿದೆ. ಜೆಡಿಎಸ್ನವರಿಗೂ ಸಮಾಧಾನವಾಗುವ ರೀತಿಯಲ್ಲಿ ನಮ್ಮ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದರು.
ಹೆಚ್.ಡಿ.ಕುಮಾರಸ್ವಾಮಿಗೆ ಬೇಸರವಾಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈಗಿನ ಅಸಮಾಧಾನದ ಬಗ್ಗೆ ನಾವು ಚರ್ಚಿಸುವುದು ತಪ್ಪಾಗುತ್ತದೆ. ಯಾವ ಸಂದರ್ಭದಲ್ಲಿ ಏನೇನು ಮಾತನಾಡಬೇಕು, ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಜೆಪಿ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರು ಚರ್ಚಿಸಲಿದ್ದಾರೆ. ಜೆಡಿಎಸ್ಗೆ ಎಷ್ಟು ಸ್ಥಾನ ಎಂದು ಇನ್ನೂ ಅಂತಿಮವಾಗಿಲ್ಲ, ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಅಸಮಾಧಾನ ವಿಚಾರಕ್ಕೆ, ಕಾಂಗ್ರೆಸ್ ನಾಯಕರಿಗೆ ಅವರ ಮುಖಂಡರಿಗಿಂತ ಬಿಜೆಪಿ ಮುಖಂಡರ ಬಗ್ಗೆಯೇ ಹೆಚ್ಚು ವಿಶ್ವಾಸ ಬಂದಿದೆ. ಬೇರೆ ರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೂ ಎಲ್ಲವೂ ಸರಿ ಹೋಗಲಿದೆ. ಸದಾನಂದ ಗೌಡರು ಪಕ್ಷ ತೊರೆಯುವುದಿಲ್ಲ, ಬಿಜೆಪಿಯಲ್ಲಿಯೇ ಇರಲಿದ್ದಾರೆ ಎಂದು ತಿಳಿಸಿದರು.