ನವದೆಹಲಿ/ಬೆಂಗಳೂರು:ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣಾ ಕಾವು ಶುರುವಾಗಿದೆ. ಇತ್ತೀಚೆಗಷ್ಟೇ ಕರ್ನಾಟದಲ್ಲಿ ಲೋಕಸಭೆ ಮತ್ತು ವಿಧಾನ್ ಪರಿಷತ್ ಚುನಾವಣೆ ನಡೆದಿತ್ತು. ಈಗ ಎಂಎಲ್‌ಸಿ ಉಪಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಖಾಲಿ ಇರುವ ಎಂಎಲ್‌ಎ ಕೋಟಾದ ಎಂಎಲ್‌ಸಿ ಸ್ಥಾನದ ಉಪಚುನಾವಣೆಯ ವೇಳಾಪಟ್ಟಿಯನ್ನು ಚುನಾವಣೆ ಆಯೋಗ ಬಿಡುಗಡೆ ಮಾಡಿದೆ. ಜೂನ್ 25ರಂದು ಎಂಎಲ್‌ಸಿಗಳ ಉಪಚುನಾವಣೆಗೆ ಅಧಿಸೂಚನೆ ಹೊರಬೀಳಲಿದೆ.
ಜುಲೈ 2ರ ವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜುಲೈ 5ರ ವರೆಗೆ ಕಾಲಾವಕಾಶ ನೀಡಲಾಗಿದೆ. ಶುಕ್ರವಾರ ಜುಲೈ 12 ರಂದು ಉಪಚುನಾವಣೆ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಆ ದಿನ ಸಂಜೆ ಐದು ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಕಾಂಗ್ರೆಸ್ನಿಂದ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದ ಜಗದೀಶ್ ಶೆಟ್ಟರ್ ಅವರು ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರಿದ್ದರು. ಜಗದೀಶ್ ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಬೆಳಗಾವಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಇದರಿಂದ ಈ ಸ್ಥಾನಕ್ಕೆ ಉಪಚುನಾವಣೆ ಅನಿವಾರ್ಯವಾಗಿದೆ. ಈ MLCಗಳ ಅಧಿಕಾರಾವಧಿಯು 14 ಜೂನ್ 2028ರ ವರೆಗೆ ಇರಲಿದೆ.
ಪರಿಷತ್ ಬಲಾಬಲ: ಕರ್ನಾಟಕ ವಿಧಾನ ಪರಿಷತ್ ಒಟ್ಟು ಸದಸ್ಯ ಬಲ 75. ಆದರೆ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರ ಸ್ಥಾನ ಸದ್ಯಕ್ಕೆ ಭದ್ರವಾಗಿಯೇ ಇದೆ. ಕಾಂಗ್ರೆಸ್‌ಗೆ ಸಭಾಪತಿ ಸ್ಥಾನದ ಮೇಲೆ ಮೊದಲಿನಿಂದಲೂ ಕಣ್ಣಿದೆ. ಸದ್ಯ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ 34, ಬಿಜೆಪಿ 30, ಜೆಡಿಎಸ್ 8. ಒಬ್ಬರು ಸಭಾಪತಿ, ಒಬ್ಬರು ಪಕ್ಷೇತರ (ಲಖನ್ ಜಾರಕಿಹೊಳಿ) ಇದ್ದಾರೆ. ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ 1 ಸ್ಥಾನ ತೆರವಾಗಿದ್ದು, ಸದ್ಯ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಇನ್ನು ಕರ್ನಾಟಕ ಸೇರಿದಂತೆ ಬಿಹಾರ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಎಂಎಲ್‌ಸಿ ಉಪಚುನಾವಣೆ ನಡೆಯಲಿದೆ.
ಓದಿ:ಬೆಂಗಳೂರು ರೇಸ್ ಕೋರ್ಸ್‌ನಲ್ಲಿ ಕುದುರೆ ಪಂದ್ಯಗಳ ಆಯೋಜನೆಗೆ ಹೈಕೋರ್ಟ್ ಅನುಮತಿ - hc given permission to horse race