ಧಾರವಾಡ: ಎಮ್ಮೆ ತಳಿ ಸಂವರ್ಧನಾ ಕೇಂದ್ರವನ್ನು ಧಾರವಾಡ ತಾಲೂಕಿನ ತೇಗೂರು ಗ್ರಾಮದಲ್ಲಿ ಸ್ಥಾಪಿಸಲಾಗಿದೆ. 1910ರಲ್ಲಿ ಜಾನುವಾರು ಕ್ಷೇತ್ರವೆಂದು ಶುರುವಾದ ಈ ಕೇಂದ್ರವು 1976ರಲ್ಲಿ ಎಮ್ಮೆ ತಳಿ ಸಂವರ್ಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿತು.
ಇಲ್ಲಿ ಕೃಷ್ಣವ್ಯಾಲಿ ಎಂಬ ಸ್ಥಳೀಯ ತಳಿಯನ್ನು ಸಂರಕ್ಷಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಏಕೈಕ ಎಮ್ಮೆ ತಳಿ ಸಂವರ್ಧನಾ ಕೇಂದ್ರ ಇದಾಗಿದೆ. 2019ರ ಜಾನುವಾರು ಗಣತಿ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 2 ಲಕ್ಷ ಜಾನುವಾರುಗಳಿದ್ದು, ಇದರಲ್ಲಿ ಸುಮಾರು 50 ಸಾವಿರ ಎಮ್ಮೆಗಳಿವೆ. ಉಳಿದಂತೆ ಆಕಳು, ಆಡು ಸೇರಿದಂತೆ ವಿವಿಧ ಪ್ರಬೇಧದ ಜಾನುವಾರಗಳು ಇವೆ.
ರಾಜ್ಯದ ವಿವಿಧ ಭಾಗಗಳಲ್ಲಿ ಬರಗಾಲ, ಅತಿವೃಷ್ಟಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭಗಳಲ್ಲಿ ಕೇವಲ ಕೃಷಿಗೆ ಮಾತ್ರ ಅವಲಂಬಿತರಾಗದೆ ಇತರ ಕೃಷಿ ಉಪಕಸುಬುಗಳಾದ ಎಮ್ಮೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮುಂತಾದ ಕ್ರಮಗಳನ್ನು ಕೈಗೊಳ್ಳುವುದರಿಂದ ಇದು ರೈತರಿಗೆ ಆರ್ಥಿಕವಾಗಿ ಸಹಾಯಕವಾಗಲಿದೆ. ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಹಾಲು ಉತ್ಪಾದನೆಗೆ ಹೆಚ್ಚು ಅವಕಾಶವಿದೆ.
ಎಮ್ಮೆತಳಿ ಸಂವರ್ಧನಾ ಕೇಂದ್ರದ ವಿವರ : ಎಮ್ಮೆ ತಳಿ ಸಂವರ್ಧನಾ ಕೇಂದ್ರದ ಜಾನುವಾರುಗಳ ಆಹಾರಕ್ಕೆ ಅನುಕೂಲವಾಗುವಂತೆ ನೀರಾವರಿ ಆಶ್ರಯದ 53 ಎಕರೆ ಪ್ರದೇಶದಲ್ಲಿ ಮತ್ತು ಮಳೆಯಾಶ್ರಿತ 51 ಎಕರೆ ಪ್ರದೇಶದಲ್ಲಿ ಮೇವು ಬೆಳೆಯಲಾಗುತ್ತದೆ. ಜಾನುವಾರುಗಳನ್ನು ಮೇಯಿಸಲು 126.09 ಎಕರೆಯ ವಿಸ್ತೀರ್ಣದ ಪ್ರದೇಶವನ್ನು ಕಾಯ್ದಿರಿಸಲಾಗಿದೆ. 41 ಎಕರೆ ವಿಸ್ತೀರ್ಣದಲ್ಲಿ ಕೆರೆ, ಬಾವಿ, ಟ್ರೆಂಚ್‍ಗಳನ್ನು ಕೂಡ ನಿರ್ಮಿಸಲಾಗಿದೆ.
ಕೇಂದ್ರದ ಮೂಲ ಧ್ಯೇಯೋದ್ದೇಶ : ರಾಜ್ಯ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಮುಖ್ಯ ಉದ್ದೇಶವೆಂದರೆ ರಾಜ್ಯದ ಘನೀಕೃತ ವೀರ್ಯ ಸಂಸ್ಕರಣಾ ಕೇಂದ್ರಗಳಿಗೆ ಉತ್ಕೃಷ್ಟ ಹಾಲಿನ ಇಳುವರಿ ಹೊಂದಿದ ಎಮ್ಮೆಗಳಿಗೆ ಜನಿಸಿದ ಗಂಡು ಎಮ್ಮೆ ಕರು ಅಥವಾ ಕೋಣ ಕರುಗಳನ್ನು ನೀಡುವುದು.
ನಂತರ ಈ ಕೋಣಗಳಿಂದ ವೀರ್ಯವನ್ನು ಸಂಗ್ರಹಿಸಿ ಸಂಸ್ಕರಿಸಿದ ವೀರ್ಯ ಕಣಗಳನ್ನು ರಾಜ್ಯದ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಿಗೆ, ಕೃತಕ ಗರ್ಭಧಾರಣೆ ಮಾಡಿಸಲು ಉಪಯೋಗಿಸಲಾಗುತ್ತಿದೆ. ಆದರಿಂದ ಇದು ರಾಜ್ಯದ ಏಕೈಕ ಮಾತೃ ಕೋಣ ಉತ್ಪಾದನಾ ಸಂಸ್ಥೆಯಾಗಿದೆ. ಹೆಚ್ಚಿನ ಇಳುವರಿ ಬರುವ ಸೂಪರ್ ಹೈಬ್ರಿಡ್ ನೇಪಿಯರ್, ಗಿನಿಹುಲ್ಲು, ಗ್ರೇಝಿಂಗ್‍ಗಿನಿ, ಮೆಕ್ಕೆಜೋಳ, ಅಲಸಂದೆ, ಸುಬಾಬುಲ್ಸ್ ಮುಂತಾದ ಮೇವಿನ ಬೆಳೆಗಳನ್ನು ಬೆಳೆದು ನಿಯಮಿತವಾಗಿ ಜಾನುವಾರುಗಳಿಗೆ ನೀಡಲಾಗುತ್ತದೆ.
ಹೈನೋದ್ಯಮದಲ್ಲಿ ಆಸಕ್ತರಿಗೆ ಅಧಿಕ ಇಳುವರಿ ನೀಡುವ ಮೇವಿನ ಬೀಜ, ಬೇರು ಮತ್ತು ಕಾಂಡಗಳನ್ನು ಇಲಾಖೆ ನಿಗದಿಪಡಿಸಿದ ದರದಲ್ಲಿ ವಿತರಿಸಲಾಗುತ್ತದೆ ಮತ್ತು ಹೆಚ್ಚುವರಿಯಾಗಿ ಉಳಿದ ಹಸಿರು ಮೇವನ್ನು ರಸಮೇವನ್ನಾಗಿ ಪರಿವರ್ತಿಸಿ ಬೇಸಿಗೆ ಹಾಗೂ ಮೇವು ಅಭಾವದ ಸಂದರ್ಭಗಳಲ್ಲಿ ಜಾನುವಾರುಗಳಿಗೆ ನೀಡಲಾಗುತ್ತದೆ. ಕ್ಷೇತ್ರದಲ್ಲಿ ಎರೆಹುಳು ಗೊಬ್ಬರ ತಯಾರಿಸುವ ಘಟಕವಿದ್ದು, ಪ್ರಾತ್ಯಕ್ಷಿಕೆಯೊಂದಿಗೆ ಆಸಕ್ತರಿಗೆ ವಿವರಿಸಲಾಗುತ್ತದೆ.