ಬೆಂಗಳೂರು: ಪಂಚ ಗ್ಯಾರಂಟಿಗಾಗಿ 2024-25ನೇ ಸಾಲಿನ ಬಜೆಟ್ನಲ್ಲಿ 52,009 ಕೋಟಿ ರೂ. ಅನುದಾನ ನೀಡಲಾಗಿದೆ. ಯಾವ ಪಂಚ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ವಿವರ ಇಲ್ಲಿದೆ.
ಸಿಎಂ ಸಿದ್ದರಾಮಯ್ಯ ಬಜೆಟ್ ನಿರೀಕ್ಷೆಯಂತೆಯೇ ಪಂಚ ಗ್ಯಾರಂಟಿ ಕೇಂದ್ರೀಕೃತವಾಗಿದೆ. ಪಂಚ ಗ್ಯಾರಂಟಿಗೆ ಹಣ ಹೊಂದಿಸಿಯೇ ಬಜೆಟ್ ಮಂಡನೆ ಮಾಡಿದ್ದಾರೆ. 2024-25ನೇ ಸಾಲಿನಲ್ಲಿ ಗ್ಯಾರಂಟಿಗಾಗಿ 52,009 ಕೋಟಿ ರೂ. ಅನುದಾನ ನೀಡಲಾಗಿದೆ. ಕಳೆದ ಬಾರಿ ಒಂಭತ್ತು ತಿಂಗಳಿಗೆ ಪಂಚ ಗ್ಯಾರಂಟಿಗಾಗಿ ಸುಮಾರು 36,000 ಕೋಟಿ ರೂ. ನೀಡಲಾಗಿತ್ತು. 2024-25ನೇ ಸಾಲಿನಲ್ಲಿ ಗ್ಯಾರಂಟಿಗಳಿಗಾಗಿ ಸಂಪೂರ್ಣ ಅನುದಾನ ಬೇಕಾಗಿದೆ. ಹೀಗಾಗಿ ಸಿಎಂ ಬಜೆಟ್ನಲ್ಲಿ ಗ್ಯಾರಂಟಿಗಳಿಗಾಗಿ ಬಹುಪಾಲು ಹಣ ಮೀಸಲಿಟ್ಟಿದ್ದಾರೆ.
ಯೋಜನೆಗಳ ಮಧ್ಯೆಯೂ ನಮ್ಮ ಸರ್ಕಾರದ ಒಂಭತ್ತು ತಿಂಗಳ ಅವಧಿಯಲ್ಲಿ ಸುಮಾರು 21,168 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಿಂದೆ ಅನುಮೋದನೆಗೊಂಡ ಕಾಮಗಾರಿಗಳಿಗೆ 2,230 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದ್ದೇವೆ. 2,188 ಕೋಟಿ ರೂ.ಗಳ ಕ್ರಿಯಾ ಯೋಜನೆಗೂ ಅನುಮೋದನೆ 15 ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಹಾಗೂ ತ್ವರಿತ ಆರ್ಥಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ನಾವು ಒತ್ತು ನೀಡುತ್ತೇವೆ ಎಂದು ಸಿಎಂ ಬಜೆಟ್ನಲ್ಲಿ ತಿಳಿಸಿದ್ದಾರೆ.
ಆರ್ಥಿಕ ಅಭಿವೃದ್ಧಿಗೆ ಪೂರಕ ಮೂಲಸೌಕರ್ಯಗಳಾದ ಎಕ್ಸ್‌ಪ್ರೆಸ್‌ವೇ, ಅತ್ಯುತ್ತಮ ಗ್ರಾಮೀಣ ರಸ್ತೆಗಳು, ವಿಶ್ವದರ್ಜೆಯ ವಿಮಾನ ನಿಲ್ದಾಣಗಳು, ಕೈಗಾರಿಕಾ ಕಾರಿಡಾರ್‌ಗಳು ಮತ್ತು ನಗರ ಪ್ರದೇಶಗಳಲ್ಲಿ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪಿಸಲು ಅಗತ್ಯ ಸಂಪನ್ಮೂಲ ಕ್ರೋಡೀಕರಿಸಲಾಗುವುದು. ವಿದ್ಯುತ್ ಉತ್ಪಾದನೆಯಲ್ಲಿ ಮತ್ತೆ ಮುಂಚೂಣಿಯ ರಾಜ್ಯವಾಗಿ ಹೊರಹೊಮ್ಮಲು ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗುವುದು ಎಂದಿದ್ದಾರೆ.
ಶಕ್ತಿ ಯೋಜನೆಗೆ ಅನುದಾನ:ಶಕ್ತಿ ಯೋಜನೆಯಡಿ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಈವರೆಗೆ 155 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದು, 3,000 ಕೋಟಿ ರೂ. ಒದಗಿಸಲಾಗಿದೆ. 2024-25 ಸಾಲಿನಲ್ಲಿ ಶಕ್ತಿ ಯೋಜನೆಗೆ 5,015 ಕೋಟಿ ರೂ. ಅನುದಾನ ನೀಡಲಾಗಿದೆ.
ಅನ್ನಭಾಗ್ಯಕ್ಕೆ ಅನುದಾನ:ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಸರ್ಕಾರ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಪ್ರತಿ ತಿಂಗಳು 170 ರೂ. ನೇರ ನಗದು ವರ್ಗಾವಣೆ ಮಾಡುತ್ತಿದೆ. ಜನವರಿ 2024ರ ಅಂತ್ಯದವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಅನ್ನಭಾಗ್ಯಕ್ಕೆ ರಾಜ್ಯ ಸರ್ಕಾರ 2023-24 ಸಾಲಿನಲ್ಲಿ ಒಟ್ಟು 10,265 ಕೋಟಿ ರೂ. ಹಂಚಿಕೆ ಮಾಡಿದೆ. ಅದೇ 2024-25 ಸಾಲಿನಲ್ಲಿ ಅನ್ನಭಾಗ್ಯ ಯೋಜನೆಗೆ 8,079 ಕೋಟಿ ರೂ. ಅನುದಾನ ನೀಡಲಾಗಿದೆ.
ಗೃಹ ಜ್ಯೋತಿಗೆ ಅನುದಾನ: ಗೃಹ ವಿದ್ಯುತ್ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಗ್ಯಾರಂಟಿ ಯೋಜನೆಯನ್ನು ಜುಲೈ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ. 1.65 ಕೋಟಿ ಗ್ರಾಹಕರು ನೊಂದಾಯಿಸಿಕೊಂಡಿದ್ದಾರೆ. ಅಂದಾಜು 5 ಕೋಟಿ ಜನರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಗಾಗಿ ರಾಜ್ಯ ಸರ್ಕಾರ 2023-24 ಸಾಲಿನಲ್ಲಿ 9,000 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. 2024-25ನೇ ಸಾಲಿನಲ್ಲಿ ಗೃಹ ಜ್ಯೋತಿಗೆ ಸಿಎಂ 9,657 ಕೋಟಿ ರೂ. ನೀಡಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ ಅನುದಾನ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿದೆ. ಕುಟುಂಬ ದತ್ತಾಂಶದನ್ವಯ 1.33 ಕೋಟಿ APL, BPL, AAY ಪಡಿತರ ಚೀಟಿ ಹೊಂದಿರುವ ಯಜಮಾನಿ ಮಹಿಳೆಯರನ್ನು ಅರ್ಹ ಫಲಾನುಭವಿಗಳೆಂದು ಗುರುತಿಸಲಾಗಿದೆ. ಜನವರಿ ಅಂತ್ಯದವರೆಗೆ 1.17 ಕೋಟಿ ಮಹಿಳೆಯರು ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಈವರೆಗೆ 11,726 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಗೃಹ ಲಕ್ಷ್ಮೀ ಯೋಜನೆಗಾಗಿ ರಾಜ್ಯ ಸರ್ಕಾರ 2023-24 ಸಾಲಿನಲ್ಲಿ 17,500 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. 2024-25ನೇ ಸಾಲಿನಲ್ಲಿ 28,608 ಕೋಟಿ ರೂ. ಒದಗಿಸಲಾಗಿದೆ.
ಯುವನಿಧಿ ಯೋಜನೆಗೆ ಅನುದಾನ:ಯುವನಿಧಿ ಯೋಜನೆಯಡಿ ಪದವಿ ಪಡೆದು ಆರು ತಿಂಗಳಾದರೂ ನಿರುದ್ಯೋಗಿಗಳಾಗಿರುವ ಪದವೀಧರ ಯುವಕರಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೊಮಾ ಪಡೆದವರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಯುವಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಡಿಬಿಟಿ ಮೂಲಕ ನೆರವು ವರ್ಗಾಯಿಸಲಾಗುತ್ತಿದೆ. ಯುವನಿಧಿಗೆ 2023-24 ಸಾಲಿನಲ್ಲಿ 250 ಕೋಟಿ ರೂ. ಅನುದಾನ ಮೀಸಲು ಇಟ್ಟಿದೆ. 2024-25 ಸಾಲಿನಲ್ಲಿ ಯುವನಿಧಿಗೆ 650 ಕೋಟಿ ರೂ. ಅನುದಾನ ನೀಡಲಾಗಿದೆ.
ಇದನ್ನೂ ಓದಿ:ಬಜೆಟ್ನಲ್ಲಿ ಘೋಷಣೆಯಾದ ಹೊಸ ಯೋಜನೆಗಳೇನು? ಇಲ್ಲಿದೆ ಮಾಹಿತಿ