ಶಿವಮೊಗ್ಗ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊರಗಿನವರಲ್ಲ, ಅವರು ಆಕ್ರೋಶಗೊಂಡಿರಬಹುದು, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಪೇಕ್ಷೆ ಸಹ ಅದೇ ಆಗಿದೆ. ಏನೇ ಕೊರತೆಗಳಿದ್ರು ಎದುರು ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಂಡು ಒಟ್ಟಾಗಿ ಹೋಗಬೇಕೆಂಬುದು ನನ್ನ ಅಭಿಪ್ರಾಯ. ಅದಕ್ಕೆ ಎಲ್ಲರೂ ಸಹಕರಿಸುತ್ತಾರೆಂದು ನಾನು ಭಾವಿಸಿರುವೆ. ಅವರು ಏನೇ ಮಾತನಾಡಿದ್ರು ಸಹ ಪಕ್ಷಕ್ಕೆ ಡ್ಯಾಮೇಜ್ ಆಗದ ರೀತಿಯಲ್ಲಿ ಒಟ್ಟಿಗೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ಇ.ಡಿ ಪುರಾವೆ ಇಲ್ಲದೆ ಮಾತನಾಡಲ್ಲ:ಮುಡಾ ಸೇರಿದಂತೆ ಇತರೆ ಹಗರಣಗಳು ಹೊರ ಬರುತ್ತಿವೆ. ಮುಡಾದ ಪೂರ್ಣ ಹಗರಣವನ್ನು ಮಾಧ್ಯಮಗಳಲ್ಲೇ ಭಿತ್ತರವಾಗಿದೆ. ಒಂದು ಸಾರಿ ಅಪರಾಧ ಮಾಡಿ ಸೈಟ್ ವಾಪಸ್ ಕೊಡೋದು ಬಿಡೋದು ಬೇರೆ ವಿಷಯವಾಗಿದೆ. ಕೇವಲ ಅಷ್ಟೇ ಅಲ್ಲ, ಸಾವಿರಾರು ಸೈಟುಗಳನ್ನು ಕಾನೂನು ಬಾಹಿರವಾಗಿ ಹಂಚಿದ್ದಾರೆಂದು ತಿಳಿಸಿದ್ದಾರೆ. ಇನ್ನು ಇಡಿ ಅವರು ಪುರಾವೆಗಳಿಲ್ಲದೆ ಹೇಳುವುದಿಲ್ಲ. ಏನೇನೂ ಆಗುತ್ತದೆ ನೋಡೋಣ ಎಂದರು.
ಸದನದಲ್ಲಿ ಬಿಜೆಪಿಯಿಂದ ಹೋರಾಟ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ಕುರಿತು ಪ್ರತಿಕ್ರಿಯಿಸಿ, ನಮ್ಮ ಶಾಸಕರೆಲ್ಲರೂ ಸದನದಲ್ಲಿ ಭಾಗವಹಿಸುತ್ತಾರೆ. ಸರ್ಕಾರದ ವೈಫಲ್ಯದ ವಿರುದ್ಧ ಜಾಗೃತಿ ಮೂಡಿಸುವಂತಹ ಕೆಲಸವನ್ನು ಎಲ್ಲ ಶಾಸಕರು ಒಟ್ಟಾಗಿ ಮಾಡುತ್ತಾರೆ ಎಂದು ಹೇಳಿದರು.