ಕರ್ನಾಟಕ

karnataka

ETV Bharat / state

ನಿಖಿಲ್ ಪರ ಜಂಟಿ ಪ್ರಚಾರ: ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ - ಯಡಿಯೂರಪ್ಪ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜಂಟಿಯಾಗಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚಿಸಿದರು.

ನಿಖಿಲ್ ಪರ ಬಿಎಸ್​ವೈ, ಹೆಚ್​ಡಿಕೆ ಜಂಟಿ ಪ್ರಚಾರ
ನಿಖಿಲ್ ಪರ ಬಿಎಸ್​ವೈ, ಹೆಚ್​ಡಿಕೆ ಜಂಟಿ ಪ್ರಚಾರ (ETV Bharat)

By ETV Bharat Karnataka Team

Published : 4 hours ago

ರಾಮನಗರ:ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್​​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ಕ್ಷೇತ್ರದ ಅಂಬಾಡಹಳ್ಳಿ ಮತ್ತು ಸೋಗಾಲ ಗ್ರಾಮಗಳಲ್ಲಿ ಜಂಟಿ ಪ್ರಚಾರ ನಡೆಸಿದ ನಾಯಕರಿಬ್ಬರು ಮತ ಯಾಚಿಸಿದರು.

ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ:ಪ್ರಚಾರದ ವೇಳೆ ಮಾತನಾಡಿದ ಯಡಿಯೂರಪ್ಪ, ಹಿಂದೆ ನಾನು ಮತ್ತು ಕುಮಾರಸ್ವಾಮಿ ಸೇರಿ ಸರ್ಕಾರ ಮಾಡಿ ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಹೆಣ್ಣುಮಕ್ಕಳ ಕಲ್ಯಾಣಕ್ಕೆ ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದೆವು. ಶಾಲೆಗೆ ತೆರಳುವ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಬೈಸಿಕಲ್ ಯೋಜನೆ ಜಾರಿ ಮಾಡಿದ್ದೆವು. ಇದನ್ನೆಲ್ಲ ಜನತೆ ಮರೆಯಬಾರದು. ಅಷ್ಟೇ ಅಲ್ಲ, ಸಂಧ್ಯಾ ಸುರಕ್ಷಾ ಸೇರಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಸಮಾಜಕ್ಕೆ ಅವೆಲ್ಲ ಉಪಯೋಗವಾಗಿದೆ. ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿಮೀರಿ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ, ನಾವು ಅಭಿವೃದ್ಧಿ ವಿಷಯ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇವೆ. ಅಭಿವೃದ್ಧಿಯ ಮೇಲೆ ಮತ ಕೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷ ಸಮಾಜ ಒಡೆಯುವ ದಿಕ್ಕಿನಲ್ಲಿ ಚುನಾವಣಾ ಕಣವನ್ನು ಕಲುಷಿತಗೊಳಿಸಿದೆ ಎಂದು ಆರೋಪ ಮಾಡಿದರು.

ಕುಮಾರಸ್ವಾಮಿ ಟೂರಿಂಗ್‌ ಟಾಕೀಸ್‌ ಇದ್ದಂತೆ ಎಂದು ಟೀಕಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿರುವ ಹೆಚ್​ಡಿಕೆ, ನಾನು ಟೂರಿಂಗ್ ಟಾಕೀಸ್ ಅಲ್ಲ, ಪರ್ಮನೆಂಟ್ ಟಾಕೀಸ್. ನನ್ನದು ಪರ್ಮನೆಂಟ್ ಟಾಕೀಸ್ ರಾಮನಗರ, ಇಲ್ಲಿ ಬಿಟ್ಟು ನಾನೆಲ್ಲೂ ಹೋಗುವುದಿಲ್ಲ, ಯಾರಿಂದಲೂ ನನ್ನನ್ನು ಕಳಿಸಲು ಸಾಧ್ಯವೂ ಇಲ್ಲ. ಅಡ್ಡದಾರಿ ರಾಜಕಾರಣ ಒಮ್ಮೆ ಯಶಸ್ಸು ಆಗಿರಬಹುದು. ಪ್ರತಿ ಬಾರಿಯೂ ಅದು ನಡೆಯಲ್ಲ ಎಂದು ಟಾಂಗ್ ಕೊಟ್ಟರು.

ಉತ್ತರ ಪ್ರದೇಶದ ಅಮೇಠಿಯಿಂದ ವೈನಾಡಿಗೆ ಓಡಿಬಂದ ರಾಹುಲ್ ಗಾಂಧಿ ಅವರದ್ದು ಯಾವ ಟಾಕೀಸ್? ಉತ್ತರ ಪ್ರದೇಶದಲ್ಲಿ ನಿಲ್ಲುವುದು ಬಿಟ್ಟು ಸಹೋದರ ತೆರವು ಮಾಡಿದ ವೈನಾಡ್ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಏಕೆ ಬಂದರು? ಹಾಗಾದರೆ ಅವರದ್ದು ಯಾವ ಟಾಕೀಸ್? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಅದನ್ನು ಸರಿಯಾಡಿಕೊಳ್ಳುವುದು ಬಿಟ್ಟು ಪಕ್ಕದ ತಟ್ಟೆ ನೋಡುವುದನ್ನು ಬಿಡಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

17 ಕೆರೆಗಳನ್ನು ತುಂಬಿಸಿ ನಾನೇ ಭಗೀರಥ ಎಂದು ಊರ ತುಂಬಾ ಕೆಲವರು ಫ್ಲೆಕ್ಸ್ ಹಾಕಿಕೊಂಡರು. ಆದರೆ ನಾನು ತಾಲೂಕಿನ 107 ಕೆರೆಗಳಿಗೆ ನೀರು ತುಂಬಿಸಿದೆ. ಹಾಗಾದರೆ, ನಾನು ಏನೆಂದು ಕರೆದುಕೊಳ್ಳಬೇಕು? ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸಿದರು. ಅವರು ಆ ಜಲಾಶಯ ಕಟ್ಟಿಸದೇ ಇದ್ದಿದ್ದರೆ ಅವರು 17 ಕೆರೆ, ನಾನು 107 ಕೆರೆ ತುಂಬಿಸಲು ಎಲ್ಲಿ ಆಗುತ್ತಿತ್ತು ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ:ಚನ್ನಪಟ್ಟಣ ಉಪ ಚುನಾವಣೆ: ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details