ಕರ್ನಾಟಕ

karnataka

ETV Bharat / state

ಜಮೀನಿನ ಕಂದಾಯ ದಾಖಲೆ ಬದಲಿಸಲು ಲಂಚ: ಪಿಡಿಒ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ - High Court - HIGH COURT

ದಾಖಲೆಗಳನ್ನು ಬದಲಿಸಲು ಲಂಚ ಪಡೆದ ಪಿಡಿಒ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

CHANGE DOCUMENTS  COURT REFUSES TO QUASH CASE  CASE AGAINST PDO  BENGALURU
ಹೈಕೋರ್ಟ್ ನಿರಾಕರಣೆ (Etv Bharat)

By ETV Bharat Karnataka Team

Published : May 3, 2024, 9:32 PM IST

ಬೆಂಗಳೂರು:ಜಮೀನಿನ ಕಂದಾಯ ದಾಖಲೆಗಳನ್ನು ಬದಲಿಸಲು ಭೂ ಮಾಲೀಕನಿಂದ 10 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಆರೋಪ ಸಂಬಂಧ ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್‌ ಹೆಬ್ಬಾಗಿಲು ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ಇಂದು ನಿರಾಕರಿಸಿತು.

ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಸುರೇಶ್‌ ಹೆಬ್ಬಾಗಿಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಪೀಠ ಈ ಆದೇಶ ಹೊರಹಾಕಿತು.

ಅಲ್ಲದೆ, ಲಭ್ಯವಿರುವ ದಾಖಲೆಗಳಿಂದ ಸುರೇಶ್‌ ಹೆಬ್ಬಾಗಿಲು ಅವರು ದೂರುದಾರರಿಗೆ ಲಂಚಕ್ಕೆ ಬೇಡಿಕೆಯಿಟ್ಟ ಹಾಗೂ ಅವರಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿ ಸತ್ಯಾಂಶವಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಹೀಗಾಗಿ ಪ್ರಕರಣದ ತನಿಖೆ ಮುಂದುವರಿಯುವುದು ಅತ್ಯಂತ ಅವಶ್ಯಕ. ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ರದ್ದುಪಡಿಸಲು ಯಾವುದೇ ಸಕಾರಣ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಪ್ರಕರಣದ ವಿವರ:ತಿಪ್ಪೇಸ್ವಾಮಿ ಎಂಬವರು ಬೆಳಗಟ್ಟ ಗ್ರಾಮದ ಸರ್ವೇ ನಂಬರ್‌ 108/1 ಮತ್ತು 108/2 ರಲ್ಲಿನ 111.48 ಚದರ ಅಡಿ ಜಾಗವನ್ನು ಮತ್ತೊಬ್ಬರಿಂದ ಖರೀದಿಸಿದ್ದರು. ಆ ಜಾಗದ ಇ-ಖಾತೆ ವರ್ಗಾವಣೆಗೆ ಕೋರಿ 2022ರ ಅ.11ರಂದು ಅರ್ಜಿ ಸಲ್ಲಿಸಿದ್ದರು. ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್‌ ಹೆಬ್ಬಾಗಿಲು ಮತ್ತವರ ಸಿಬ್ಬಂದಿ 2023ರ ಫೆ.24ರಂದು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನಡೆಸಿದ್ದರು. ಆದರೆ, ಕಂದಾಯ ದಾಖಲೆಗಳ ಬದಲಾವಣೆಗೆ 10 ಸಾವಿರ ರೂ. ಲಂಚ ನೀಡುವಂತೆ ತಿಪ್ಪೇಸ್ವಾಮಿ ಅವರಲ್ಲಿ ಸುರೇಶ್‌ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ.

ಲಂಚ ನೀಡಲು ಇಷ್ಟಪಡದ ತಿಪ್ಪೇಸ್ವಾಮಿ ಚಿತ್ರದುರ್ಗ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಲಂಚಕ್ಕೆ ಬೇಡಿಕೆಯಿಟ್ಟ ಸಂಬಂಧ ಸುರೇಶ್‌ ಹೆಬ್ಬಾಗಿಲು ತಮ್ಮೊಂದಿಗೆ ನಡೆಸಿದ ಫೋನ್‌ ಭಾಷಣೆಯನ್ನು ತಿಪ್ಪೇಸ್ವಾಮಿ ರೆಕಾರ್ಡ್‌ ಮಾಡಿಕೊಂಡಿದ್ದರು. ಅದನ್ನೂ ಸಹ ಲೋಕಾಯುಕ್ತ ಪೊಲೀಸರಿಗೆ ನೀಡಿದ್ದರು. ಈ ಸಂಬಂಧ 2023ರ ಫೆ.28ರಂದು ಅಧಿಕೃತವಾಗಿ ತಿಪ್ಪೇಸ್ವಾಮಿ ದೂರು ನೀಡಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1983ರ ಸೆಕ್ಷನ್‌ 7(ಎ) ಲಂಚ ಸ್ವೀಕಾರ ಆರೋಪದ ಮೇಲೆ ಸುರೇಶ್‌ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ತಿಪ್ಪೇಸ್ವಾಮಿ ಅವರಿಂದ ಲಂಚ ಸ್ವೀಕರಿಸುವಾಗ ಸುರೇಶ್‌ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದರು. ಪ್ರಕರಣ ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಸುರೇಶ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ABOUT THE AUTHOR

...view details